ಚಾಡ್: ಜೈಲಿನಲ್ಲಿ ದಂಗೆ, ಗುಂಡಿನ ದಾಳಿಗೆ ಮೂವರು ಮೃತ್ಯು
100ಕ್ಕೂ ಅಧಿಕ ಕೈದಿಗಳ ಪಲಾಯನ

Photo : AFP
ಮೊಂಗೊ: ಮಧ್ಯ ಆಫ್ರಿಕಾದ ಚಾಡ್ ದೇಶದ ಗುವೆರಾ ಪ್ರಾಂತದ ಮೊಂಗೊ ನಗರದ ಬಳಿಯ ಜೈಲಿನಲ್ಲಿ ಕೈದಿಗಳು ದಾಂಧಲೆ ನಡೆಸಿದ್ದು 100ಕ್ಕೂ ಅಧಿಕ ಕೈದಿಗಳು ಜೈಲಿನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ದಾಂಧಲೆ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು ರಾಜ್ಯದ ಗವರ್ನರ್ ಸಹಿತ ಇತರ ಮೂವರು ಗಾಯಗೊಂಡಿದ್ದಾರೆ. ಬಿಗಿ ಭದ್ರತೆಯ ಜೈಲಿನಲ್ಲಿ ಶುಕ್ರವಾರ ತಡರಾತ್ರಿ ಕೈದಿಗಳು ದಾಂಧಲೆ ನಡೆಸಿದ್ದು ಜೈಲಿನ ಮ್ಯಾನೇಜರ್ ಕಚೇರಿಗೆ ನುಗ್ಗಿ ಬಂದೂಕುಗಳನ್ನು ಕಸಿದುಕೊಂಡಿದ್ದಾರೆ. ಆಗ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದು ಕೈದಿಗಳೂ ಗುಂಡಿನ ದಾಳಿ ಆರಂಭಿಸಿದ್ದಾರೆ. ಅದೇ ಸಂದರ್ಭ ಜೈಲಿಗೆ ಭೇಟಿ ನೀಡಿದ್ದ ಗವರ್ನರ್ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡರೆ ಇತರ ಇಬ್ಬರು ಸಿಬ್ಬಂದಿಗಳೂ ಗಾಯಗೊಂಡಿದ್ದಾರೆ. ಮೂವರು ಕೈದಿಗಳು ಸಾವನ್ನಪ್ಪಿದ್ದು 100ಕ್ಕೂ ಅಧಿಕ ಕೈದಿಗಳು ತಪ್ಪಿಸಿಕೊಂಡು ಪಲಾಯನ ಮಾಡಿರುವುದಾಗಿ ವರದಿ ಹೇಳಿದೆ.
ತಮಗೆ ಕಡಿಮೆ ಆಹಾರ ನೀಡಲಾಗುತ್ತಿದೆ ಎಂದು ಕೈದಿಗಳು ದಂಗೆ ಎದ್ದಿದ್ದು ಒಟ್ಟು 132 ಕೈದಿಗಳು ಜೈಲಿನಿಂದ ಪಲಾಯನ ಮಾಡಿರುವುದಾಗಿ ಅಧಿಕಾರಿಗಳು ರವಿವಾರ ದೃಢಪಡಿಸಿದ್ದಾರೆ.





