ʼಚಾಂಪಿಯನ್ಸ್ ಟ್ರೋಫಿʼ ಕರ್ತವ್ಯ ನಿರ್ವಹಿಸಲು ನಿರಾಕರಣೆ : 100ಕ್ಕೂ ಅಧಿಕ ಪಾಕಿಸ್ತಾನಿ ಪೊಲೀಸರ ವಜಾ

Photo | PCB
ಇಸ್ಲಾಮಾಬಾದ್ : ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ವೇಳೆ ಕರ್ತವ್ಯವನ್ನು ನಿರ್ವಹಿಸಲು ನಿರಾಕರಿಸಿದ ಮತ್ತು ಕರ್ತವ್ಯಕ್ಕೆ ಗೈರಾದ 100ಕ್ಕೂ ಅಧಿಕ ಪಾಕಿಸ್ತಾನಿ ಪೊಲೀಸರನ್ನು ವಜಾಗೊಳಿಸಲಾಗಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಸಮಯದಲ್ಲಿ ನಿಯೋಜಿತ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸಲು ನಿರಾಕರಿಸಿದ ಪಾಕಿಸ್ತಾನದ ಪಂಜಾಬ್ನ 100ಕ್ಕೂಅಧಿಕ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಈ ಕುರಿತು ಪಾಕಿಸ್ತಾನದ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿ ಕರ್ತವ್ಯಕ್ಕೆ ಗೈರುಹಾಜರಾದ 100ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಕ್ರಿಕೆಟ್ ಪಂದ್ಯ ನಡೆಯುವ ಲಾಹೋರ್ನ ಸ್ಟೇಡಿಯಂನಿಂದ ಗೊತ್ತುಪಡಿಸಿದ ಹೋಟೆಲ್ಗೆ ಪ್ರಯಾಣಿಸುವ ತಂಡಗಳಿಗೆ ಭದ್ರತೆ ಒದಗಿಸಲು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಆದರೆ, ಅವರು ಗೈರುಹಾಜರಾಗುವ ಮೂಲಕ ಜವಾಬ್ಧಾರಿಗಳನ್ನು ನಿರ್ವಹಿಸಲು ಸಂಪೂರ್ಣವಾಗಿ ನಿರಾಕರಿಸಿದರು ಎಂದು ಹೇಳಿದರು.
ವಜಾಗೊಂಡ ಪೊಲೀಸ್ ಸಿಬ್ಬಂದಿ ತಮ್ಮ ನಿಯೋಜಿತ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಏಕೆ ನಿರಾಕರಿಸಿದರು ಎಂಬುದರ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಕರ್ತವ್ಯದ ಒತ್ತಡದ ಕಾರಣದಿಂದಾಗಿ ಗೈರಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.





