ತಾಂತ್ರಿಕ ದೋಷದಿಂದ 1,000ಕ್ಕೂ ಹೆಚ್ಚು ವಿಮಾನ ರದ್ದು : UK ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ

Photo: screengrab/ x.com/Turbinetraveler
ಬ್ರಿಟನ್: ಬ್ರಿಟನ್ ನ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಮಂಗಳವಾರ ದೇಶಾದ್ಯಂತ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಬ್ರಿಟನ್ ನ ವಿವಿಧ ವಿಮಾನ ನಿಲ್ದಾಣಗಳಲ್ಲಿ 1,000ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿದೆ ಎಂದು ವಿಮಾನಗಳ ಸಂಚಾರವನ್ನು ಟ್ರ್ಯಾಕ್ ಮಾಡುವ ಜಾಲತಾಣ ಫ್ಲೈಟ್ ರಾಡಾರ್24 ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬ್ರಿಟನ್ ನ ನ್ಯಾಷನಲ್ ಏರ್ ಟ್ರಾಫಿಕ್ ಸರ್ವಿಸಸ್ (NATS), ಫ್ಲೈಟ್ ಪ್ರೊಸೆಸಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿರುವುದು ಪತ್ತೆಯಾಗಿದೆ ಎಂದು ತಿಳಿಸಿದೆ. ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಎಂಜಿನಿಯರ್ ಗಳು ಸ್ಥಳದಲ್ಲೇ ಕಾರ್ಯಪ್ರವೃತ್ತರಾಗಿದ್ದಾರೆ ಎಂದು NATS ಹೇಳಿದೆ.
ಲಂಡನ್ ಹೀಥ್ರೂ ಸೇರಿದಂತೆ ಬ್ರಿಟನ್ ನ ವಿವಿಧ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಮತ್ತು ಅಲ್ಲಿಂದ ನಿರ್ಗಮಿಸುವ ಕನಿಷ್ಠ 1,000 ವಿಮಾನಗಳ ಹಾರಾಟ ರದ್ದಾಗಿದೆ. ಬ್ರಿಟಿಷ್ ಏರ್ವೇಸ್, ಈಸಿಜೆಟ್ (easyJet), ಕೆಎಲ್ಎಂ (KLM) ಮತ್ತು ಲುಫ್ಥಾನ್ಸಾ (Lufthansa) ಸೇರಿದಂತೆ ಹಲವು ಪ್ರಮುಖ ವಿಮಾನಯಾನ ಸಂಸ್ಥೆಗಳ ಸೇವೆಗಳ ಮೇಲೆ ಈ ತಾಂತ್ರಿಕ ದೋಷ ಗಂಭೀರ ಪರಿಣಾಮ ಬೀರಿದೆ.
ಈ ಸಮಸ್ಯೆಯಿಂದಾಗಿ ದೇಶಾದ್ಯಂತ ಪ್ರಯಾಣಿಕರು ಭಾರಿ ತೊಂದರೆ ಎದುರಿಸುವಂತಾಗಿದೆ. ಬ್ರಿಟನ್ ನ ವಾಯುಪ್ರದೇಶ ಮುಕ್ತವಾಗಿದ್ದು, ವಿಮಾನಗಳ ಹಾರಾಟ ಮುಂದುವರಿದಿದ್ದರೂ ವ್ಯಾಪಕ ವಿಳಂಬ ಉಂಟಾಗಿದೆ.
ಸಂಜೆಯ ವೇಳೆಗೆ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ವಿಮಾನ ಸಂಚಾರ ವ್ಯವಸ್ಥೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ ಎಂದು NATS ತಿಳಿಸಿದೆ. ಆದಾಗ್ಯೂ, ರದ್ದಾದ ಹಾಗೂ ವಿಳಂಬಗೊಂಡ ವಿಮಾನಗಳ ಹಿನ್ನಡೆಯನ್ನು (backlog) ತೆರವುಗೊಳಿಸುವ ಕಾರ್ಯ ಮುಂದುವರಿದಿರುವುದರಿಂದ ಬ್ರಿಟನ್ ನ 15ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಇನ್ನೂ ವಿಳಂಬ ಮುಂದುವರಿದಿದೆ.
ಫ್ಲೈಟ್ಅವೇರ್ (FlightAware) ಮಾಹಿತಿಯ ಪ್ರಕಾರ, ಲಂಡನ್ ನ ಹೀಥ್ರೂ ವಿಮಾನ ನಿಲ್ದಾಣವೊಂದರಲ್ಲೇ ಸುಮಾರು 100 ವಿಮಾನಗಳ ಹಾರಾಟ ರದ್ದಾಗಿದ್ದು, 367 ವಿಮಾನಗಳು ವಿಳಂಬಗೊಂಡಿವೆ. ಗ್ಯಾಟ್ವಿಕ್ ವಿಮಾನ ನಿಲ್ದಾಣದಲ್ಲಿ ಸುಮಾರು 250 ವಿಮಾನಗಳು, ಅಂದರೆ ಒಟ್ಟು ವಿಮಾನಗಳ ಶೇ.31ರಷ್ಟು, ವಿಳಂಬಗೊಂಡಿವೆ.
ಲಂಡನ್ ಮಾತ್ರವಲ್ಲದೆ ಎಡಿನ್ಬರ್ಗ್, ಡಬ್ಲಿನ್, ಲುಟನ್, ಬರ್ಮಿಂಗ್ಹ್ಯಾಮ್, ಅಬರ್ಡೀನ್ ಹಾಗೂ ಗ್ಲಾಸ್ಗೋ ವಿಮಾನ ನಿಲ್ದಾಣಗಳಲ್ಲೂ ವಿಮಾನಗಳ ವಿಳಂಬ ಮತ್ತು ರದ್ದತಿ ವರದಿಯಾಗಿದೆ.
ಬ್ರಿಟಿಷ್ ಏರ್ವೇಸ್ ನ 96, ಈಸಿಜೆಟ್ ನ 92, ಕೆಎಲ್ಎಂನ 20, ಲುಫ್ಥಾನ್ಸಾದ 12 ಹಾಗೂ ಸ್ವಿಸ್ ಏರ್ಲೈನ್ಸ್ ನ 11 ವಿಮಾನಗಳು ರದ್ದಾಗಿವೆ ಎಂದು ತಿಳಿದುಬಂದಿದೆ.
ಏರ್ ಇಂಡಿಯಾ ಪ್ರತಿಕ್ರಿಯೆ
ಬ್ರಿಟನ್ ಗೆ ತೆರಳುವ ಮತ್ತು ಅಲ್ಲಿಂದ ಭಾರತಕ್ಕೆ ಆಗಮಿಸುವ ತನ್ನ ವಿಮಾನ ಸೇವೆಗಳ ಮೇಲೂ ಈ ತಾಂತ್ರಿಕ ದೋಷ ಪರಿಣಾಮ ಬೀರಿದೆ ಎಂದು ಏರ್ ಇಂಡಿಯಾ ಎಚ್ಚರಿಸಿದೆ. ಹಲವು ವಿಮಾನಗಳ ಮಾರ್ಗ ಬದಲಾವಣೆ, ವಿಳಂಬ ಅಥವಾ ರದ್ದತಿಗೆ ಕ್ರಮ ಕೈಗೊಳ್ಳಲಾಗಿದ್ದು, ವಿಮಾನಗಳು ಹಾಗೂ ಸಿಬ್ಬಂದಿಯ ಲಭ್ಯತೆಯ ಕೊರತೆಯಿಂದಾಗಿ ಇತರ ಸೇವೆಗಳ ಮೇಲೂ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದು ಏರ್ ಇಂಡಿಯಾ ‘X’ನಲ್ಲಿ ತಿಳಿಸಿದೆ.
ವಿಮಾನ ಸಂಚಾರ ನಿಯಂತ್ರಣ ವ್ಯವಸ್ಥೆಯ ದೋಷವನ್ನು ಸರಿಪಡಿಸಲಾಗಿದ್ದು, ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ ಎಂದು NATS ತಿಳಿಸಿದೆ. ಆದಾಗ್ಯೂ, ವಿಮಾನಗಳ ವೇಳಾಪಟ್ಟಿಗಳು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳುವವರೆಗೆ ಪ್ರಯಾಣಿಕರು ವಿಳಂಬ ಮತ್ತು ಇತರ ವ್ಯತ್ಯಯಗಳನ್ನು ಎದುರಿಸಬೇಕಾಗಬಹುದು ಎಂದು ಅಂದಾಜಿಸಲಾಗಿದೆ.






