ಗಾಝಾದಲ್ಲಿ 14,000ಕ್ಕೂ ಹೆಚ್ಚು ಮಂದಿ ಮೃತ್ಯು: ವೈಮಾನಿಕ ದಾಳಿಗಳನ್ನು ನಡೆಸಲು ಇಸ್ರೇಲ್ ಹೇಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುತ್ತಿದೆ?

Photo: PTI
ಗಾಝಾ: ಮಾನವೀಯ ನೆರವಿಗಾಗಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಏರ್ಪಟ್ಟಿದ್ದ ಕದನ ವಿರಾಮ ಇಂದು ಅಂತ್ಯಗೊಂಡಿದ್ದು, ಗಾಝಾದಲ್ಲಿ ಯುದ್ಧವು ಪುನಾರಂಭಗೊಂಡ ಕೆಲವೇ ನಿಮಿಷಗಳಲ್ಲಿ ಗಾಯಾಳುಗಳ ವರದಿಯಾಗಿದೆ. ಅಕ್ಟೋಬರ್ 7ರಂದು ಹಮಾಸ್ ನಡೆಸಿದ್ದ ಭೀಕರ ದಾಳಿಯಲ್ಲಿ 1,400 ಮಂದಿ ಇಸ್ರೇಲ್ ನಾಗರಿಕರು ಮೃತಪಟ್ಟಿದ್ದರಿಂದ, ಹಮಾಸ್ ಅನ್ನು ಬುಡಮಟ್ಟ ಕಿತ್ತೊಗೆಯುವ ಸಂಕಲ್ಪವನ್ನು ಇಸ್ರೇಲ್ ಮಾಡಿದೆ. ಗಾಝಾದ ಮೇಲೆ ನಡೆಯುತ್ತಿರುವ ಇಸ್ರೇಲ್ ದಾಳಿಯಲ್ಲಿ ಇದುವರೆಗೂ 14,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.
ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಪೂರ್ಣಪ್ರಮಾಣದ ಭೂ ಯುದ್ಧ ಹಾಗೂ ವೈಮಾನಿಕ ದಾಳಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯಾಗುತ್ತಿರುವುದು ಮತ್ತೊಮ್ಮೆ ಗಮನ ಸೆಳೆದಿದೆ. ಇದಕ್ಕೂ ಮುನ್ನ, 2021ರಲ್ಲಿ ಗಾಝಾದ ಮೇಲೆ ‘ಆಪರೇಷನ್ ಗಾರ್ಡಿಯನ್ಸ್ ಆಫ್ ದಿ ವಾಲ್’ ಎಂಬ ದಾಳಿಯನ್ನು ಇಸ್ರೇಲ್ ನಡೆಸಿತ್ತು. 11 ದಿನಗಳ ಕಾಲ ನಡೆದಿದ್ದ ಆ ದಾಳಿಯು ‘ಪ್ರಪ್ರಥಮ ಕೃತಕ ಬುದ್ಧಿಮತ್ತೆ ಯುದ್ಧ’ ಎಂದೇ ಹೆಸರಾಗಿದೆ. ಕೃತಕ ಬುದ್ಧಿಮತ್ತೆ ಸಾಧನಗಳಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಗಾಝಾದ ಗುರಿಗಳ ಮೇಲಿನ ದಾಳಿಗಾಗಿ ಬಳಸಿಕೊಳ್ಳಲಾಗಿತ್ತು.
ಸದ್ಯ ಮುಂದುವರಿದಿರುವ ಯುದ್ಧದಲ್ಲಿ, ಗುರಿಗಳನ್ನು ಆಯ್ಕೆ ಮಾಡಲು ಹಾಗೂ ನಿಖರ ವೈಮಾನಿಕ ದಾಳಿ ನಡೆಸಲು ಇಸ್ರೇಲ್ ಡಿಫೆನ್ಸ್ ಫೋರ್ಸ್ಸಸ್ ಕೃತಕ ಬುದ್ಧಿಮತ್ತೆಯನ್ನು ನಿಯೋಜಿಸಿದೆ. ಇದಕ್ಕೂ ಮುನ್ನ ಬಳಸಲಾಗಿದ್ದ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಾದ ‘ಗಾಸ್ಪೆಲ್’, ‘ಆಲ್ ಕೆಮಿಸ್ಟ್’ ಹಾಗೂ ‘ಡೆಪ್ತ್ ಆಫ್ ವಿಸ್ಡಮ್’ ಮತ್ತೆ ಬಳಕೆಗೆ ಬಂದಿವೆ.
‘ಗಾಸ್ಪೆಲ್’ನಂಥ ವ್ಯವಸ್ಥೆಗಳು ನಿಖರ ಹಾಗೂ ಅತ್ಯುನ್ನತ ದರ್ಜೆಯ ಬೇಹುಗಾರಿಕಾ ವಿಷಯಗಳನ್ನು ಸುಧಾರಿಸುವ ಮೂಲಕ ಅಗತ್ಯಕ್ಕೆ ತಕ್ಕಂತೆ ಬಿರುಸಿನ ವೇಗದಲ್ಲಿ ಗುರಿಗಳನ್ನು ಸೃಷ್ಟಿಸಲು ಸ್ವಯಂಚಾಲಿತ ಸಾಧನಗಳಿಗೆ ಅವಕಾಶ ನೀಡುತ್ತವೆ.
“ಕೃತಕ ಬುದ್ಧಿಮತ್ತೆಯ ನೆರವಿನಿಂದ ಹಾಗೂ ಕ್ಷಿಪ್ರ ಮತ್ತು ಪರಿಷ್ಕೃತ ಬೇಹುಗಾರಿಕಾ ಮಾಹಿತಿಗಳನ್ನು ಹೊರತೆಗೆಯುವ ಮೂಲಕ ಯಂತ್ರದ ಶಿಫಾರಸು ಹಾಗೂ ವ್ಯಕ್ತಿಯೊಬ್ಬರು ಪತ್ತೆ ಹಚ್ಚಿದ ಗುರುತುಗಳೆರಡರ ನಡುವೆಯೂ ಸಂಪೂರ್ಣ ಹೋಲಿಕೆ ಇರುವಂತೆ ಪತ್ತೆ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಕೃತಕ ಬುದ್ಧಿಮತ್ತೆಯು ಗುರಿಯನ್ನು ಶಿಫಾರಸು ಮಾಡುತ್ತದೆ” ಎನ್ನುತ್ತದೆ ಇಸ್ರೇಲ್ ಡಿಫೆನ್ಸಸ್ ಫೋರ್ಸಸ್.
2021ರ ಕದನದ ಸಂದರ್ಭದಲ್ಲಿ ಹ್ಯೂಮನ್ ಇಂಟಲಿಜೆನ್ಸ್ (HUMINT), ವಿಷುಯಲ್ ಇಂಟಲಿಜೆನ್ಸ್ (VISINT) ಹಾಗೂ ಸಿಗ್ನಲ್ ಇಂಟಲಿಜೆನ್ಸ್ (SIGINT) ಸಾಧನಗಳ ಮೂಲಕ ಕಲೆ ಹಾಕಿದ್ದ ದತ್ತಾಂಶಗಳನ್ನು ಕಂಪ್ಯೂಟರ್ ಗಳಲ್ಲಿ ಕ್ರೋಡೀಕರಿಸಲಾಗಿದ್ದು, ನಿಖರ ವೈಮಾನಿಕ ದಾಳಿಗೆ ನೆರವು ಪಡೆಯಲು ಆ ದತ್ತಾಂಶಗಳನ್ನು ಬಳಸಿಕೊಳ್ಳಲಾಗುತ್ತಿದೆ. ಉಪಗ್ರಹಗಳು, ಭೂ ಬೇಹುಗಾರಿಕೆ ಹಾಗೂ ನಿಗಾವಣೆಗಳಿಂದ ಸಂಗ್ರಹಿಸಲಾಗಿರುವ ಎಲ್ಲ ದತ್ತಾಂಶಗಳನ್ನೂ ಈ ಕಂಪ್ಯೂಟರ್ ಗಳಲ್ಲಿ ಕ್ರೋಡೀಕರಿಸಲಾಗುತ್ತದೆ.







