ಇಸ್ರೇಲಿ ಸೇನಾ ನೆಲೆಗಳ ಮೇಲೆ ಹಿಜ್ಬುಲ್ಲಾದಿಂದ 60ಕ್ಕೂ ಅಧಿಕ ರಾಕೆಟ್ ದಾಳಿ
![ಇಸ್ರೇಲಿ ಸೇನಾ ನೆಲೆಗಳ ಮೇಲೆ ಹಿಜ್ಬುಲ್ಲಾದಿಂದ 60ಕ್ಕೂ ಅಧಿಕ ರಾಕೆಟ್ ದಾಳಿ ಇಸ್ರೇಲಿ ಸೇನಾ ನೆಲೆಗಳ ಮೇಲೆ ಹಿಜ್ಬುಲ್ಲಾದಿಂದ 60ಕ್ಕೂ ಅಧಿಕ ರಾಕೆಟ್ ದಾಳಿ](https://www.varthabharati.in/h-upload/2024/05/16/1266955-huizbulah.webp)
PC : NDTV
ಬೈರೂತ್ : ಲೆಬನಾನ್ನ ಪೂರ್ವ ಭಾಗದಲ್ಲಿ ಇಸ್ರೇಲಿ ಸೇನಾಪಡೆಗಳು ನಡೆಸಿದ ವಾಯುದಾಳಿಗೆ ಪ್ರತೀಕಾರವಾಗಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಹೋರಾಟಗಾರರು ಗುರುವಾರ ಇಸ್ರೇಲಿ ಸೇನಾ ನೆಲೆಗಳ ಮೇಲೆ 60ಕ್ಕೂ ಅಧಿಕ ರಾಕೆಟ್ ದಾಳಿಗಳನ್ನು ನಡೆಸಿದ್ದಾರೆ.
ದಕ್ಷಿಣ ಇಸ್ರೇಲ್ನಲ್ಲಿ, ಹಮಾಸ್ ಕಳೆದ ವರ್ಷದ ಅಕ್ಟೋಬರ್ 7ರಂದು ದಾಳಿ ನಡೆಸಿದಾಗಿನಿಂದ ಇಸ್ರೇಲ್ ಹಾಗೂ ಹಮಾಸ್ನ ಜೊತೆಗಾರ ಸಂಘಟನೆಯಾದ ಹಿಜ್ಬುಲ್ಲಾ ಹೋರಾಟಗಾರರ ನಡುವೆ ಹೆಚ್ಚುಕಮ್ಮಿ ಪ್ರತಿ ದಿನವೂ ಗುಂಡಿನ ಚಕಮಕಿ ನಡೆಯುತ್ತಲೇ ಇದೆ.
ಹಿಜ್ಬುಲ್ಲಾ ಹೋರಾಟಗಾರರು ಇಸ್ರೇಲಿ ಆಕ್ರಮಿತ ಗೋಲನ್ ಬೆಟ್ಟಗಳಲ್ಲಿರುವ ಹಲವಾರು ಇಸ್ರೇಲಿ ಮಿಲಿಟರಿ ನೆಲೆಗಳ ಮೇಲೆ 60ಕ್ಕೂ ಅಧಿಕ ಕತ್ಯುಶಾ ರಾಕೆಟ್ಗಳೊಂದಿಗೆ ಕ್ಷಿಪಣಿ ದಾಳಿಯನ್ನು ನಡೆಸಿದ್ದಾರೆಂದು ಆ ಗುಂಪಿನ ಹೇಳಿಕೆಯೊಂದು ತಿಳಿಸಿದೆ.
ಬುಧವಾರ ಮಧ್ಯರಾತ್ರಿಯಿಂದ ಲೆಬನಾನ್ನ ಬಾಲ್ಬೆಕ್ ಪ್ರದೇಶದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿತ್ತೆಂದು ಲೆಬನಾನ್ನ ಸರಕಾರಿ ಮಾಧ್ಯಮವೊಂದು ವರದಿ ಮಾಡಿದೆ.
ಇಸ್ರೇಲ್ ಸೇನೆಯ ದಾಳಿಯಲ್ಲಿ ನಾಗರಿಕನೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಹಾಗೂ ಬೆಂಕಿ ಅನಾಹುತ ಉಂಟಾಗಿದೆ ಎಂದು ಲೆಬನಾನ್ನ ಅಧಿಕೃತ ರಾಷ್ಟ್ರೀಯ ಸುದ್ದಿ ಏಜೆನ್ಸಿ (ಎನ್ಎನ್ಎ) ತಿಳಿಸಿದೆ. ಇಸ್ರೇಲ್ ವಾಯುದಾಳಿಯಿಂದಾಗಿ ಹಿಜ್ಬುಲ್ಲಾ ಶಿಬಿರಕ್ಕೂ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಬುಧವಾರದಂದು ಇಸ್ರೇಲ್ ನಗರ ಟೈಬಿರಿಯಾಸ್ ಸಮೀಪದ ಸೇನಾ ನೆಲೆಯೊಂದರ ಮೇಲೆ ತಾನು ಡ್ರೋನ್ ದಾಳಿಗಳನ್ನು ನಡೆಸಿರುವುದಾಗಿ ಹಿಜ್ಬುಲ್ಲಾ ಬುಧವಾರ ತಿಳಿಸಿತ್ತು. ದಕ್ಷಿಣ ಲೆಬನಾನ್ನಲ್ಲಿ ಹಿಜ್ಬುಲ್ಲಾದ ಫೀಲ್ಡ್ ಕಮಾಂಡರ್ಗಳಲ್ಲಿ ಒಬ್ಬನನ್ನು ತಾನು ಹತ್ಯೆಗೈದಿರುವುದಾಗಿ ಇಸ್ರೇಲ್ ಘೋಷಿಸಿದ ಮರುದಿನವೇ ಈ ದಾಳಿ ನಡೆದಿತ್ತು.
ಇಸ್ರೇಲ್ನ ಗುಂಡಿನ ದಾಳಿಯಲ್ಲಿ ತನ್ನ ಸಂಘಟನೆಯ ಸದಸ್ಯ, ಫೀಲ್ಡ್ ಕಮಾಂಡರ್ ಹುಸೈನ್ ಮಕ್ಕಿ ಎಂಬಾತ ಸಾವನ್ನಪ್ಪಿರುವುದಾಗಿ ಹಿಜ್ಬುಲ್ಲಾದ ಮೂಲಗಳು ತಿಳಿಸಿವೆ.
ಇಸ್ರೇಲಿ ಸೇನೆ ಹಾಗೂ ಹಿಜ್ಬುಲ್ಲಾ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಲೆಬನಾನ್ನಲ್ಲಿ ಈವರೆಗೆ ಕನಿಷ್ಠ 413 ಮಂದಿ ಸಾವನ್ನಪ್ಪಿದ್ದಾರೆ.