ಉತ್ತರ ಪ್ರದೇಶ |ಮೂವರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ನಾಲೆಗೆ ಹಾರಿದ ಮಹಿಳೆ; ನಾಲ್ವರೂ ಮೃತ್ಯು

Photo credit: etvbharat.com
ಬಂಡಾ (ಉತ್ತರ ಪ್ರದೇಶ): ತನ್ನ ಪತಿಯೊಂದಿಗಿನ ದಾಂಪತ್ಯ ಜೀವನದಲ್ಲಿ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಬಂಡಾ ಜಿಲ್ಲೆಯ ಕೆನ್ ನಾಲೆಗೆ ಹಾರಿದ್ದು, ಈ ಘಟನೆಯಲ್ಲಿ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರ ಮೃತದೇಹಗಳನ್ನು ನಾಲೆಯಿಂದ ಹೊರತೆಗೆಯಲಾಗಿದ್ದು, ಮೃತ ಮಹಿಳೆಯ ಪತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಶನಿವಾರ ಪೊಲೀಸರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್, "ರಿಸೌರಾ ಗ್ರಾಮದ ಅಖಿಲೇಶ್ ಆರ್ಖ್ ಅವರ ಪತ್ನಿ ರೀನಾ (30) ತನ್ನ ಮೂವರು ಮಕ್ಕಳಾದ ಹಿಮಾಂಶು (9), ಅನ್ಷಿ (5) ಹಾಗೂ ಪ್ರಿನ್ಸ್ (3) ರೊಂದಿಗೆ ಕಾಣೆಯಾಗಿದ್ದಾರೆ ಎಂದು ಶನಿವಾರ ಪೊಲೀಸರಿಗೆ ಮಾಹಿತಿ ಬಂತು. ಅದರಂತೆ ರೀನಾ ಕುಟುಂಬದ ಸದಸ್ಯರೊಂದಿಗೆ ಪೊಲೀಸರು ಹುಡುಕಾಟ ಪ್ರಾರಂಭಿಸಿದಾಗ ರೀನಾಳ ಬಳೆಗಳು ಹಾಗೂ ಮಕ್ಕಳ ಬಟ್ಟೆಗಳು ಅವರ ಸ್ವಗ್ರಾಮದಿಂದ ಒಂದು ಕಿಮೀ ದೂರವಿರುವ ಕೆನ್ ನಾಲೆಯ ಬಳಿ ಪತ್ತೆಯಾದವು" ಎಂದು ತಿಳಿಸಿದ್ದಾರೆ.
ಆಕೆ ನಾಲೆಗೆ ಹಾರಿರಬಹುದು ಎಂಬ ಶಂಕೆಯಿಂದ ಪೊಲೀಸರು, ನೀರಿನ ಹೊರ ಹರಿವನ್ನು ಸ್ಥಗಿತಗೊಳಿಸಿ, ಸ್ಥಳೀಯ ಈಜುಗಾರರು ಹಾಗೂ ಪೊಲೀಸ್ ತಂಡಗಳ ನೆರವಿನೊಂದಿಗೆ ಮೃತ ದೇಹಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ನಾಲೆಯಲ್ಲಿ ಒಟ್ಟಿಗೇ ಇದ್ದ ಮೃತ ದೇಹಗಳನ್ನು ಸಂಜೆ ಸುಮಾರು 4 ಗಂಟೆಯ ವೇಳೆಗೆ ಹೊರ ತೆಗೆಯಲಾಯಿತು. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಅವರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಕಾನೂನು ಕ್ರಮಗಳು ಪ್ರಗತಿಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.







