ಪಹಲ್ಗಾಮ್ ದಾಳಿಯಲ್ಲಿ ಎಲ್ಇಟಿ ಪಾತ್ರದ ಬಗ್ಗೆ ಪಾಕ್ಗೆ ಪ್ರಶ್ನೆ; ವಿಶ್ವಸಂಸ್ಥೆ ಭದ್ರತಾ ಮಂಡಳಿ ಗೌಪ್ಯ ಸಭೆ
► ದಾಳಿಗೆ ಹೊಣೆಗಾರರನ್ನು ಗುರುತಿಸಲು ಆಗ್ರಹ

ಸಾಂದರ್ಭಿಕ ಚಿತ್ರ | PC : NDTV
ವಿಶ್ವಸಂಸ್ಥೆ: ಪಾಕಿಸ್ತಾನದ ಕೋರಿಕೆಯ ಮೇರೆಗೆ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಗೌಪ್ಯ ಸಭೆಯಲ್ಲಿ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆಗಳನ್ನು ಒಡ್ಡಿವೆ. ಆದರೆ 15 ಸದಸ್ಯರ ಭದ್ರತಾ ಮಂಡಳಿ ಈ ವಿಷಯಕ್ಕೆ ಸಂಬಂಧಿಸಿ ಯಾವುದೇ ನಿರ್ಣಯವನ್ನು ಅಂಗೀಕರಿಸಲಿಲ್ಲ ಎಂದು ವರದಿಯಾಗಿದೆ.
ಪಹಲ್ಗಾಮ್ ದಾಳಿಯಲ್ಲಿ ಪಾಕ್ ಮೂಲದ ಭಯೋತ್ಪಾದಕ ಗುಂಪು ಲಷ್ಕರೆ ತಯ್ಯಿಬ (ಎಲ್ಇಟಿ) ಭಾಗಿಯಾಗಿರುವ ಸಾಧ್ಯತೆಯಿದೆಯೇ ಎಂದು ಭದ್ರತಾ ಮಂಡಳಿ ಪಾಕಿಸ್ತಾನದ ಪ್ರತಿನಿಧಿಯನ್ನು ಪ್ರಶ್ನಿಸಿದ್ದು ದಾಳಿಗೆ ಹೊಣೆಗಾರರನ್ನು ಗುರುತಿಸುವ ಅಗತ್ಯವನ್ನು ಒತ್ತಿಹೇಳಿದೆ ಎಂದು ವರದಿಯಾಗಿದೆ.
ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಗುರಿಯಾಗಿಸಿರುವ ವರದಿಯ ಬಗ್ಗೆ ಹಲವು ಸದಸ್ಯರು ಕಳವಳ ವ್ಯಕ್ತಪಡಿಸಿದರು ಮತ್ತು ಭಯೋತ್ಪಾದಕ ದಾಳಿಯನ್ನು ಖಂಡಿಸಿದರು. ಪಾಕಿಸ್ತಾನ ಇತ್ತೀಚೆಗೆ ನಡೆಸಿದ ಕ್ಷಿಪಣಿ ಪರೀಕ್ಷೆಗಳು ಹಾಗೂ ಹಲವು ಸಚಿವರ ಪರಮಾಣು ಬೆದರಿಕೆ ಹೇಳಿಕೆಗಳು ಉದ್ವಿಗ್ನತೆಯನ್ನು ಉಲ್ಬಣಗೊಳಿಸುವ ಅಂಶಗಳೆಂದು ಸದಸ್ಯರು ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ.
ಪರಿಸ್ಥಿತಿಯನ್ನು ಅಂತರಾಷ್ಟ್ರೀಕರಣಗೊಳಿಸುವ ಪಾಕಿಸ್ತಾನದ ಪ್ರಯತ್ನ ವಿಫಲವಾಗಿದ್ದು ಸಮಸ್ಯೆಯನ್ನು ಭಾರತದೊಂದಿಗೆ ದ್ವಿಪಕ್ಷೀಯವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿದೆ ಎಂದು ಮೂಲಗಳು ಹೇಳಿವೆ. ಸಭೆಗೂ ಮುನ್ನ ಭಾರತ ಸರಕಾರ ಭದ್ರತಾ ಮಂಡಳಿಯ ಸದಸ್ಯ ದೇಶಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪ್ರಧಾನಿ ಮೋದಿ ಚೀನಾವನ್ನು ಹೊರತುಪಡಿಸಿ ಉಳಿದ 4 ಶಾಶ್ವತ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೂ ಚೀನಾ, ಪಾಕಿಸ್ತಾನ ಹೊರತುಪಡಿಸಿ ಮಂಡಳಿಯ ಇತರ ಎಲ್ಲಾ ಸದಸ್ಯ ರಾಷ್ಟ್ರಗಳ ಜೊತೆ ಮಾತುಕತೆ ನಡೆಸಿದ್ದರು ಎಂದು ವರದಿಯಾಗಿದೆ.(ಪಾಕಿಸ್ತಾನ 2 ವರ್ಷಗಳ ಅವಧಿಗೆ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯನಾಗಿದೆ).
ಪಹಲ್ಗಾಮ್ ದಾಳಿಯಲ್ಲಿ ತನ್ನ ಕೈವಾಡವಿದೆ ಎಂಬ ಭಾರತದ ಆಪಾದನೆಯನ್ನು ಪಾಕಿಸ್ತಾನ ತಿರಸ್ಕರಿಸಿದ್ದು `ಭಾರತದ ಆರೋಪಗಳು ಸ್ವ-ನಿರ್ಣಯಕ್ಕಾಗಿ ಕಾಶ್ಮೀರಿ ಜನರ ನ್ಯಾಯಯುತ ಹೋರಾಟವನ್ನು ಹಾಳು ಮಾಡುವ ತಂತ್ರವಾಗಿದೆ ಮತ್ತು ಪಾಕಿಸ್ತಾನ ಹಾಗೂ ಇತರೆಡೆ ತಾನು ಬೆಂಬಲಿಸುತ್ತಿರುವ ಭಯೋತ್ಪಾದಕ ಕೃತ್ಯಗಳು ಹಾಗೂ ಉದ್ದೇಶಿತ ಹತ್ಯೆಗಳನ್ನು ಮರೆಮಾಚಲು ನಡೆಸಿರುವ ತಂತ್ರವಾಗಿದೆ' ಎಂದು ಪ್ರತಿಪಾದಿಸಿದೆ.
` ಉದ್ವಿಗ್ನತೆ ಹೆಚ್ಚುವ ಅಪಾಯದ ಬಗ್ಗೆ ಮಂಡಳಿ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದರು ಮತ್ತು ಸಂಯಮ ವಹಿಸುವಂತೆ ಆಗ್ರಹಿಸಿದರು. ಜಮ್ಮು ಮತ್ತು ಕಾಶ್ಮೀರ ವಿವಾದವು ಪ್ರಾದೇಶಿಕ ಅಸ್ಥಿರತೆಯ ಮೂಲ ಕಾರಣವಾಗಿದೆ ಎಂದು ಹಲವು ಸದಸ್ಯರು ಒತ್ತಿಹೇಳಿದರು' ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಹೇಳಿದೆ.







