ಪಾಕಿಸ್ತಾನ | ಇಮ್ರಾನ್ ಖಾನ್ ರ ತೆಹ್ರೀಕ್-ಇ-ಇನ್ಸಾಫ್ ಪಕ್ಷದ 166 ಸದಸ್ಯರಿಗೆ 10 ವರ್ಷ ಜೈಲು ಶಿಕ್ಷೆ

ಇಮ್ರಾನ್ ಖಾನ್ | PC : NDTV
ಲಾಹೋರ್: ಮೇ 9, 2023ರಂದು ಪಂಜಾಬ್ ಪ್ರಾಂತ್ಯದಲ್ಲಿನ ಐಎಸ್ಐ ಕಟ್ಟಡ ಹಾಗೂ ಇನ್ನಿತರ ಸೇನಾ ನಿರ್ಮಾಣಗಳ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗುರುವಾರ ಪಾಕಿಸ್ತಾನ ನ್ಯಾಯಾಲಯವೊಂದು ಇದೀಗ ಸೆರೆವಾಸದಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಶಾಸನ ರಚನೆಕಾರರೂ ಸೇರಿದಂತೆ 166 ಮಂದಿ ಸದಸ್ಯರಿಗೆ 10 ವರ್ಷದ ಸೆರೆವಾಸ ಶಿಕ್ಷೆಯನ್ನು ಘೋಷಿಸಿದೆ.
ದೇಶಾದ್ಯಂತ ಆಗಸ್ಟ್ 5ರಿಂದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷವು ‘ಇಮ್ರಾನ್ ಖಾನ್ ರನ್ನು ಬಿಡುಗಡೆಗೊಳಿಸಿ’ ಚಳವಳಿಯನ್ನು ಹಮ್ಮಿಕೊಳ್ಳಲು ಮುಂದಾಗಿರುವ ಬೆನ್ನಿಗೇ, ರಾಷ್ಟ್ರೀಯ ಸಂಸತ್ತಿನ ವಿರೋಧ ಪಕ್ಷದ ನಾಯಕರು, ಸೆನೆಟ್ ಸದಸ್ಯರು ಹಾಘೂ ಇನ್ನಿತರ ಹಲವು ಶಾಸಕ ರಚನೆಕಾರರು ಸೇರಿದಂತೆ 166 ಮಂದಿ ಪಕ್ಷದ ಸದಸ್ಯರಿಗೆ ಈ ಶಿಕ್ಷೆಯನ್ನು ಘೋಷಿಸಲಾಗಿದೆ.
ಫೈಸಲಾಬಾದ್ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ನೀಡಿರುವ ಈ ತೀರ್ಪನ್ನು ಬಲವಾಗಿ ಖಂಡಿಸಿರುವ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷ, ಪಕ್ಷದ ಸಂಸದರನ್ನು ಅನರ್ಹಗೊಳಿಸಲು ಹಾಗೂ ಪಕ್ಷದ ಶಾಂತಿಯುತ ಪ್ರತಿಭಟನೆಯನ್ನು ತಡೆಯುವ ಯೋಜನೆಯ ಭಾಗವಾಗಿ ಈ ತೀರ್ಪು ನೀಡಲಾಗಿದೆ ಎಂದು ಆರೋಪಿಸಿದೆ.
ಮೇ 9, 2023ರಂದು ಲಾಹೋರ್ ನಿಂದ ಸುಮಾರು 130 ಕಿಮೀ ದೂರದಲ್ಲಿರುವ ಜಿನ್ನಾ ಹೌಸ್ (ಲಾಹೋರ್ ಕಾರ್ಪ್ಸ್ ಕಮಾಂಡರ್ ಹೌಸ್), ಮಿಯಾನ್ ವಾಲಿ ವಾಯು ನೆಲೆ ಹಾಗೂ ಫೈಸಲಾಬಾದ್ ನಲ್ಲಿರುವ ಐಎಸ್ಐ ಕಟ್ಟಡ ಸೇರಿದಂತೆ ಹಲವಾರು ಸೇನಾ ನಿರ್ಮಾಣಗಳ ಮೇಲೆ ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದ್ದರು. ಇಮ್ರಾನ್ ಖಾನ್ ಅವರ ಬಂಧನವನ್ನು ಪ್ರತಿಭಟಿಸಿ, ಮೊಟ್ಟಮೊದಲ ಬಾರಿಗೆ ರಾವಲ್ಪಿಂಡಿಯಲ್ಲಿರುವ ಸೇನಾ ಮುಖ್ಯ ಕಚೇರಿಯ ಮೇಲೂ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದ್ದರು.
ಫೈಸಲಾಬಾದ್ ನ ಐಎಸ್ಐ ಕಟ್ಟಡದ ಮೇಲೆ ನಡೆದಿದ್ದ ದಾಳಿಯ ಸಂಬಂಧ ಗುರುವಾರ ತೀರ್ಪು ಪ್ರಕಟಿಸಿದ ಫೈಸಲಾಬಾದ್ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ, 185 ಮಂದಿ ಆರೋಪಿಗಳ ಪೈಕಿ 108 ಮಂದಿಯನ್ನು ದೋಷಿಗಳೆಂದು ಘೋಷಿಸಿತು ಉಳಿದ 77 ಮಂದಿಯನ್ನು ಖುಲಾಸೆಗೊಳಿಸಿತು.
ಫೈಸಲಾಬಾದ್ ನ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ 58 ಮಂದಿ ಆರೋಪಿಗಳಿಗೆ 10 ವರ್ಷಗಳ ಸೆರೆವಾಸ ಶಿಕ್ಷೆಯನ್ನು ಘೋಷಿಸಲಾಗಿದೆ.
ರಾಷ್ಟ್ರೀಯ ಸಂಸತ್ತಿನ ವಿರೋಧ ಪಕ್ಷದ ನಾಯಕ ಉಮರ್ ಅಯೂಬ್, ಸೆನೆಟ್ ನ ವಿರೋಧ ಪಕ್ಷದ ನಾಯಕ ಶಿಬ್ಲಿ ಫರಾಝ್ ಹಾಗೂ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಗಣ್ಯ ನಾಯಕರಾದ ಝರ್ತಾಜ್ ಗುಲ್ ಹಾಗೂ ಸಾಹಿಬ್ ಝಾದಾ ಹಮೀದ್ ರಾಝಾರಿಗೂ ನ್ಯಾಯಾಲಯ 10 ವರ್ಷಗಳ ಸೆರೆವಾಸ ಶಿಕ್ಷೆಯನ್ನು ವಿಧಿಸಿದೆ.
ದೋಷಿಗಳೆಂದು ಘೋಷಿತರಾಗಿರುವ ಆರೋಪಿಗಳ ಪೈಕಿ ರಾಷ್ಟ್ರೀಯ ಸಂಸತ್ತಿನ ಆರು ಮಂದಿ ಸದಸ್ಯರು ಸೇರಿದ್ದು, ಈ ಪೈಕಿ ಒಬ್ಬರು ಪಂಜಾಬ್ ವಿಧಾನಸಭೆ ಹಾಗೂ ಮತ್ತೊಬ್ಬರು ಸೆನೆಟ್ ಸದಸ್ಯರಾಗಿದ್ದಾರೆ. ಮೇ 9ರ ಘಟನೆಗೆ ಸಂಬಂಧಿಸಿದಂತೆ ನಡೆದಿರುವ ವಿಚಾರಣೆಯಲ್ಲಿ ಈವರೆಗೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ 14 ಮಂದಿ ಶಾಸನ ರಚನೆಕಾರರನ್ನು ದೋಷಿಗಳೆಂದು ಘೋಷಿಸಲಾಗಿದ್ದು, ಈ ಸಂಬಂಧ ಅವರನ್ನೆಲ್ಲ ಅನರ್ಹಗೊಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮಧ್ಯಂತರ ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಅಲಿ, ಈ ತೀರ್ಪನ್ನು ನಾವು ಲಾಹೋರ್ ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.







