ಸಿಬ್ಬಂದಿ ಮಟ್ಟದ ಒಪ್ಪಂದಕ್ಕೆ ಸಹಿ ಹಾಕದೆ ಪಾಕಿಸ್ತಾನದಿಂದ ಮರಳಿದ ಐಎಂಎಫ್ ನಿಯೋಗ : 1 ಶತಕೋಟಿ ಡಾಲರ್ ಸಾಲದ ಕಂತಿಗೆ ತಡೆ

ಐಎಂಎಫ್ ನಿಯೋಗ | PC : indianexpress.com
ಇಸ್ಲಮಾಬಾದ್, ಅ.9: ಬಹು ನಿರೀಕ್ಷಿತ ಸಿಬ್ಬಂದಿ ಮಟ್ಟದ ಒಪ್ಪಂದ(ಎಸ್ಎಲ್ಎ)ಕ್ಕೆ ಪಾಕಿಸ್ತಾನದೊಂದಿಗೆ ಸಹಿ ಹಾಕದೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ನಿಯೋಗವು ಅಮೆರಿಕಾಕ್ಕೆ ಮರಳಿದ್ದು ಪಾಕಿಸ್ತಾನದ ಆರ್ಥಿಕ ಚೇತರಿಕೆ ಪ್ರಯತ್ನಗಳಿಗೆ ಪ್ರಮುಖ ಹಿನ್ನಡೆಯಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
ಇದರೊಂದಿಗೆ, ಪ್ರಮುಖ ನೀತಿ ಹಾಗೂ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವವರೆಗೆ ಪಾಕಿಸ್ತಾನದ ಮುಂದಿನ ಸಾಲದ ಕಂತು, ಸುಮಾರು 1 ಶತಕೋಟಿ ಡಾಲರ್ ಮೊತ್ತವನ್ನು ಐಎಂಎಫ್ ತಡೆ ಹಿಡಿದಿದೆ. ಸುದೀರ್ಘ ಸಮಾಲೋಚನೆಗಳ ಬಳಿಕವೂ ಪಾಕಿಸ್ತಾನ ಮತ್ತು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ ನಡುವಿನ ಮಾತುಕತೆ ಅಪೂರ್ಣವಾಗಿ ಉಳಿದಿದೆ. ಬಾಕಿಯುಳಿದಿರುವ ಹಲವಾರು ಬದ್ಧತೆಗಳು ಮತ್ತು ರಚನಾತ್ಮಕ ಸುಧಾರಣೆಗಳನ್ನು ಪೂರೈಸಲು `ಗ್ರೇಸ್ ಸಮಯ'ವನ್ನು ಪಾಕಿಸ್ತಾನ ಕೋರಿದೆ. ಆದರೆ ಗಮನಾರ್ಹ ಪ್ರಗತಿಯಾಗಿದ್ದರೂ ಇದು ಒಪ್ಪಂದವನ್ನು ಅಂತಿಮಗೊಳಿಸಲು ಸಾಕಾಗುವುದಿಲ್ಲ ಎಂದು ಐಎಂಎಫ್ ಸ್ಪಷ್ಟಪಡಿಸಿದೆ. ಮೂಲಗಳ ಪ್ರಕಾರ, ಪಾಕಿಸ್ತಾನವು 2025-26ರ ಆರ್ಥಿಕ ವರ್ಷಕ್ಕೆ ರಕ್ಷಣಾ ವೆಚ್ಚದಲ್ಲಿ 20% ಹೆಚ್ಚಳ ಮಾಡಿರುವುದಕ್ಕೆ ಮತ್ತು ಮುಂದಿನ 6 ತಿಂಗಳುಗಳಲ್ಲಿ ಸುಮಾರು 2.5 ಶತಕೋಟಿ ಡಾಲರ್ ಮೊತ್ತವನ್ನು `ಹೆಚ್ಚುವರಿ ವಿವರಿಸಲಾಗದ ಖರ್ಚು' ಎಂದು ಉಲ್ಲೇಖಿಸಿರುವುದಕ್ಕೆ ಐಎಂಎಫ್ ನಿಯೋಗ ತೀವ್ರ ಕಳವಳ ಸೂಚಿಸಿದ್ದು ಭದ್ರತಾ ಕಾರ್ಯಾಚರಣೆಗಳಿಗಾಗಿ ನಿಗದಿಪಡಿಸಿದ ವಿಶೇಷ ನಿಧಿಗಳ ರಚನೆಯನ್ನೂ ಪ್ರಶ್ನಿಸಿದೆ ಎಂದು ವರದಿ ಹೇಳಿದೆ.
ಎಸ್ಎಲ್ಎಗೆ ಸಹಿ ಹಾಕದೆ ಐಎಂಎಫ್ ನಿಯೋಗ ತೆರಳಿರುವುದರಿಂದ ಪಾಕಿಸ್ತಾನ ಪ್ರಸ್ತುತ ಐಎಂಎಫ್ ನಿಧಿಗಳನ್ನು ಬಳಸಲು ಅಥವಾ ಇತರ ಜಾಗತಿಕ ಹಣಕಾಸು ಸಂಸ್ಥೆಗಳಿಂದ ಸಮಾನಾಂತರ ಹಣಕಾಸು ನೆರವು ಪಡೆಯಲು ಸಾಧ್ಯವಾಗದು. ಆದರೆ ಟ್ರಂಪ್ ಆಡಳಿತದೊಂದಿಗೆ ಇರುವ `ಉತ್ತಮ ಸಂಬಂಧ'ವನ್ನು ಬಳಸಿಕೊಂಡು, ಬಾಕಿಯುಳಿದಿರುವ ಬದ್ಧತೆಗಳನ್ನು ಈಡೇರಿಸಿ ಶೀಘ್ರವೇ ಐಎಂಎಫ್ನಿಂದ 1 ಶತಕೋಟಿ ಡಾಲರ್ ಸಾಲದ ಒಪ್ಪಂದ ಅಂತಿಮಗೊಳಿಸುವ ಭರವಸೆಯನ್ನು ಪಾಕಿಸ್ತಾನ ಹೊಂದಿರುವುದಾಗಿ ವರದಿಯಾಗಿದೆ.





