ಪಾಕಿಸ್ತಾನ: ಪ್ರತೀಕಾರ ಕ್ರಮದ ಬಗ್ಗೆ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ; ವಾಯುಪ್ರದೇಶ ಮುಚ್ಚಿದ ಪಾಕಿಸ್ತಾನ

PC : PTI
ಇಸ್ಲಾಮಾಬಾದ್: ಭಾರತದ ವೈಮಾನಿಕ ಕಾರ್ಯಾಚರಣೆಯ ಬಳಿಕ ತನ್ನ ಸಂಪೂರ್ಣ ವಾಯುಪ್ರದೇಶವನ್ನು ಮುಚ್ಚಲು ಪಾಕಿಸ್ತಾನ ನಿರ್ಧರಿಸಿರುವುದಾಗಿ ವರದಿಯಾಗಿದೆ.
ಇದುವರೆಗೆ, ಭಾರತದ ವಿಮಾನಯಾನ ಸಂಸ್ಥೆ ಹಾಗೂ ಅದಕ್ಕೆ ಸಂಬಂಧಿಸಿದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಪಾಕಿಸ್ತಾನ ಮುಚ್ಚಿತ್ತು. ಆದರೆ ಬುಧವಾರ ಬೆಳಿಗ್ಗೆ ಭಾರತ ನಡೆಸಿದ ನಿಖರ ವೈಮಾನಿಕ ಕಾರ್ಯಾಚರಣೆಯ ನಂತರ ದೇಶದ ಎಲ್ಲಾ ವಾಯುಪ್ರದೇಶವನ್ನು ಮುಂದಿನ 48 ಗಂಟೆಗಳವರೆಗೆ, ದೇಶೀಯ ವಿಮಾನಗಳ ಸಹಿತ ಎಲ್ಲಾ ದೇಶಗಳಿಗೂ ಮುಚ್ಚುವುದಾಗಿ ಪಾಕಿಸ್ತಾನ ಮಿಲಿಟರಿಯ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯ ಪ್ರಧಾನ ಕಚೇರಿ ಘೋಷಿಸಿದೆ.
ತುರ್ತು ಅಗತ್ಯದ ವಿಮಾನಗಳಿಗೆ ಮಾತ್ರ ಅವಕಾಶ ಇರುವುದಾಗಿ ಹೇಳಿಕೆ ತಿಳಿಸಿದೆ. ಪ್ರತಿದಾಳಿಗೆ ಪ್ರತಿಜ್ಞೆ ಮಾಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಪಾಕಿಸ್ತಾನ ಹೇಳಿದೆ. ಭಾರತದ ಮಿಲಿಟರಿ ಕಾರ್ಯಾಚರಣೆಯ ಬಳಿಕ (ಬುಧವಾರ ಬೆಳಿಗ್ಗೆ 1:05 ರಿಂದ 1:30ರವರೆಗೆ) ಇಸ್ಲಾಮಾಬಾದ್, ಲಾಹೋರ್ ಗೆ ಬರುತ್ತಿದ್ದ ಎಲ್ಲಾ ವಿಮಾನಗಳನ್ನೂ ಕರಾಚಿ ವಿಮಾನ ನಿಲ್ದಾಣದತ್ತ ತಿರುಗಿಸಲಾಗಿದೆ. ಈ ಮಧ್ಯೆ, ಪಾಕಿಸ್ತಾನದ ಪ್ರತೀಕಾರ ಕ್ರಮದ ಬಗ್ಗೆ ಚರ್ಚಿಸಲು ಪ್ರಧಾನಿ ಶಹಬಾಝ್ ಷರೀಫ್ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆ ನಡೆಸಿರುವುದಾಗಿ ವರದಿಯಾಗಿದೆ.







