ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ಜೆಫ್-17 ತಂಡರ್ ಯುದ್ಧವಿಮಾನ ಪೂರೈಕೆ: ಪಾಕಿಸ್ತಾನ ಸೇನೆ ಘೋಷಣೆ

photo:AP
ಇಸ್ಲಾಮಾಬಾದ್, ಜ. 9: ಪಾಕಿಸ್ತಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಜೆಎಫ್-17 ತಂಡರ್’ ಯುದ್ಧವಿಮಾನಗಳನ್ನು ಬಾಂಗ್ಲಾದೇಶಕ್ಕೆ ಮಾರಾಟ ಮಾಡುವ ಒಪ್ಪಂದವೊಂದಕ್ಕೆ ಶೀಘ್ರವೇ ಸಹಿ ಹಾಕಲಾಗುವುದು ಎಂದು ಪಾಕಿಸ್ತಾನಿ ಸೇನೆ ಘೋಷಿಸಿದೆ.
ಪಾಕಿಸ್ತಾನ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಝಹೀರ್ ಅಹ್ಮದ್ ಬಾಬರ್ ಸಿದು ಮತ್ತು ಬಾಂಗ್ಲಾದೇಶದ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಹಸನ್ ಮಹ್ಮೂದ್ ಖಾನ್ ನಡುವೆ ಮಾತುಕತೆ ನಡೆದ ಬಳಿಕ ಈ ಬೆಳವಣಿಗೆ ನಡೆದಿದೆ.
ಪಾಕಿಸ್ತಾನಿ ವಾಯುಪಡೆಯ ಸಮರ ದಾಖಲೆಯನ್ನು ಬಾಂಗ್ಲಾದೇಶದ ಏರ್ ಚೀಫ್ ಮಾರ್ಶಲ್ ಶ್ಲಾಘಿಸಿದರು ಹಾಗೂ ತನ್ನ ದೇಶದ ವಾಯುಪಡೆಯನ್ನು ಬಲಪಡಿಸಲು ಮತ್ತು ಕಣ್ಗಾವಲನ್ನು ಹೆಚ್ಚಿಸಲು ನೆರವು ನೀಡುವಂತೆ ಕೋರಿದರು ಎಂದು ಪಾಕಿಸ್ತಾನಿ ಸೇನೆಯ ಮಾಧ್ಯಮ ಘಟಕ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್)ನ ಹೇಳಿಕೆಯೊಂದು ತಿಳಿಸಿದೆ.
ಮಾತುಕತೆಯ ವೇಳೆ, ಸೂಪರ್ ಮುಶ್ಶಾಕ್ ತರಬೇತಿ ವಿಮಾನಗಳನ್ನು ಕ್ಷಿಪ್ರವಾಗಿ ಹಸ್ತಾಂತರಿಸಲಾಗುವುದು ಎಂಬ ಭರವಸೆಯನ್ನೂ ಬಾಂಗ್ಲಾದೇಶದ ವಾಯುಪಡೆಯ ಮುಖ್ಯಸ್ಥರಿಗೆ ನೀಡಲಾಯಿತು ಎಂದು ಹೇಳಿಕೆ ತಿಳಿಸಿದೆ.
‘ಸೂಪರ್ ಮುಶ್ಶಾಕ್’ ಹಗುರ, 2-3 ಆಸನಗಳ ಒಂಟಿ ಇಂಜಿನ್ ವಿಮಾನವಾಗಿದೆ. ಈ ವಿಮಾನವನ್ನು ಮುಖ್ಯವಾಗಿ ತರಬೇತಿ ಉದ್ದೇಶಕ್ಕೆ ಬಳಸಲಾಗುತ್ತದೆ. ಈ ವಿಮಾನವನ್ನು ಈಗಾಗಲೇ ಪೈಲಟ್ ತರಬೇತಿಗಾಗಿ ಅಝರ್ಬೈಜಾನ್, ತುರ್ಕಿಯೆ, ಇರಾನ್, ಇರಾಕ್ ಮುಂತಾದ ದೇಶಗಳು ಬಳಸುತ್ತಿವೆ.





