ಅಮೆರಿಕದ ನೆಲದಿಂದ ಭಾರತಕ್ಕೆ ಬೆದರಿಕೆಯೊಡ್ಡಿದ ಪಾಕ್ ಸೇನಾ ಮುಖ್ಯಸ್ಥ!

PC - X
ವಾಷಿಂಗ್ಟನ್, ಆ.10: ಒಂದು ವೇಳೆ ಭವಿಷ್ಯದಲ್ಲಿ ಭಾರತದ ಜೊತೆಗಿನ ಯುದ್ಧದಲ್ಲಿ ದೇಶಕ್ಕೆ ಅಸ್ತಿತ್ವದ ಬೆದರಿಕೆ ಎದುರಾದರೆ ಪಾಕಿಸ್ತಾನವು ಈ ಪ್ರದೇಶವನ್ನು ಪರಮಾಣು ಯುದ್ಧಕ್ಕೆ ತಳ್ಳಲಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಮತ್ತೊಮ್ಮೆ ಭಾರತಕ್ಕೆ ಬೆದರಿಕೆ ಒಡ್ಡಿದ್ದಾರೆ.
ಅಮೆರಿಕಾಕ್ಕೆ ಭೇಟಿ ನೀಡಿರುವ ಮುನೀರ್ ಫ್ಲೋರಿಡಾದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ನಾವು ಪರಮಾಣು ರಾಷ್ಟ್ರ. ನಾವು ಮುಳುಗುತ್ತಿದ್ದೇವೆ ಎಂದು ನಮಗೆ ಅನಿಸಿದರೆ ನಮ್ಮೊಂದಿಗೆ ಅರ್ಧ ಜಗತ್ತನ್ನೇ ಮುಳುಗಿಸಿ ಬಿಡುತ್ತೇವೆ' ಎಂದು ಅವರು ಹೇಳಿರುವುದಾಗಿ `ದಿ ಪ್ರಿಂಟ್' ವರದಿ ಮಾಡಿದೆ. ಅಮೆರಿಕದ ನೆಲದಿಂದ ಇದೇ ಮೊದಲ ಬಾರಿಗೆ ಮೂರನೇ ರಾಷ್ಟ್ರವೊಂದರ ವಿರುದ್ಧ ಪರಮಾಣು ಬೆದರಿಕೆ ಒಡ್ಡಲಾಗಿದೆ ಎಂದು ವರದಿ ಹೇಳಿದೆ.
ಪಹಲ್ಗಾಮ್ ದಾಳಿಯ ಬಳಿಕ ಭಾರತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸಿರುವುದನ್ನು ಉಲ್ಲೇಖಿಸಿದ ಮುನೀರ್ `ಭಾರತದ ನಿರ್ಧಾರವು 250 ದಶಲಕ್ಷ ಜನರನ್ನು ಹಸಿವೆಯ ಅಪಾಯಕ್ಕೆ ದೂಡಿದೆ. ನಮ್ಮ ಬಳಿ ಸಾಕಷ್ಟು ಕ್ಷಿಪಣಿಗಳಿವೆ. ಒಂದು ವೇಳೆ ಭಾರತ ಅಣೆಕಟ್ಟು ನಿರ್ಮಿಸಿದರೆ 10 ಕ್ಷಿಪಣಿ ಉಡಾಯಿಸಿ ಅದನ್ನು ನಾಶಗೊಳಿಸುತ್ತೇವೆ. ಸಿಂಧೂ ನದಿ ಭಾರತದ ಕುಟುಂಬದ ಆಸ್ತಿಯಲ್ಲ. ನಮ್ಮಲ್ಲಿ ಸಾಕಷ್ಟು ಕ್ಷಿಪಣಿಗಳ ದಾಸ್ತಾನು ಇದೆ' ಎಂದು ಮತ್ತೆ ಬೆದರಿಕೆ ಒಡ್ಡಿರುವುದಾಗಿ ವರದಿಯಾಗಿದೆ.





