Pakistan | ಪೊಲೀಸ್ ವಾಹನಗಳ ಮೇಲೆ ದಾಳಿ; 10 ಅಧಿಕಾರಿಗಳು ಮೃತ್ಯು

ಸಾಂದರ್ಭಿಕ ಚಿತ್ರ(AI)
ಪೇಶಾವರ, ನ. 11: ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತದ ಕೊಹಾಟ್ ಜಿಲ್ಲೆಯ ದರ್ಬುಕಾಚ್ ಜಲಂಧರ್ ಬಂಡಾ ಪ್ರದೇಶದಲ್ಲಿ ಬುಧವಾರ ಪೊಲೀಸ್ ಅಧಿಕಾರಿಗಳಿದ್ದ ವಾಹನಗಳ ಮೇಲೆ ಉಗ್ರರು ಹೊಂಚು ದಾಳಿ ನಡೆಸಿದ್ದು, ಕನಿಷ್ಠ 10 ಮಂದಿ ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ.
ಅಕ್ರಮ ಚಿನ್ನದ ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ ನಡೆಸಲು ತೆರಳುತ್ತಿದ್ದ ಪೊಲೀಸ್ ತಂಡದ ಮೇಲೆ ಬೆಟ್ಟದ ಮೇಲಿನಿಂದ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಭದ್ರತಾ ಪಡೆಗಳು ಮತ್ತು ದಾಳಿಕೋರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ದಾಳಿಕೋರರು ಐದು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಕೊಹಾಟ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಡಿವೈಎಸ್ಪಿ ಹೈದರ್ ಝಮಾನ್ ಮತ್ತು ಸಬ್ ಇನ್ಸ್ಪೆಕ್ಟರ್ ಮುಖ್ತಿಯಾರ್ ಸೇರಿದ್ದಾರೆ. ಗುಂಡಿನ ಚಕಮಕಿ ಮುಂದುವರಿದಿದ್ದು, ಹೆಚ್ಚುವರಿ ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಗಾಯಗೊಂಡ 12 ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ದಾಳಿ ನಡೆದ ಕೆಲವು ಗಂಟೆಗಳ ಬಳಿಕ ಪಾಕಿಸ್ತಾನದ ತಾಲಿಬಾನ್ (ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್–ಟಿಟಿಪಿ) ಸಂಘಟನೆಯು ಹೊಣೆ ಹೊತ್ತುಕೊಂಡಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.






