ಪಾಕಿಸ್ತಾನ: ಬಾಂಬ್ ದಾಳಿ, 5 ಪೊಲೀಸರ ಮೃತ್ಯು

Photo: indiatoday.in
ಇಸ್ಲಮಾಬಾದ್: ವಾಯವ್ಯ ಪಾಕಿಸ್ತಾನದಲ್ಲಿ ಪೋಲಿಯೊ ಲಸಿಕಾ ಶಿಬಿರಕ್ಕೆ ಭದ್ರತಾ ವ್ಯವಸ್ಥೆಗೆಂದು ನಿಯೋಜಿಸಲಾಗಿದ್ದ ಪೊಲೀಸ್ ವಾಹನವನ್ನು ಗುರಿಯಾಗಿಸಿ ನಡೆದ ಬಾಂಬ್ ದಾಳಿಯಲ್ಲಿ ಕನಿಷ್ಠ 5 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಖೈಬರ್ ಪಖ್ತೂಂಕ್ವಾದ ಬಜೌರ್ ಜಿಲ್ಲೆಯಲ್ಲಿ ಬಾಂಬ್ ಸ್ಫೋಟಿಸಿದೆ. ಈ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಪೋಲಿಯೊ ಲಸಿಕೆ ಶಿಬಿರಕ್ಕೆ ಭದ್ರತೆಗೆಂದು ನಿಯೋಜಿಸಲಾಗಿದ್ದ 25 ಪೊಲೀಸರನ್ನು ಕರೆದೊಯ್ಯುತ್ತಿದ್ದ ವಾಹನವನ್ನು ಗುರಿಯಾಗಿಸಿ ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿ ಬಾಂಬ್ ಸ್ಫೋಟ ನಡೆಸಿದ್ದು ಐದು ಪೊಲೀಸರು ಮೃತಪಟ್ಟಿದ್ದಾರೆ ಮತ್ತು ಇತರ ಹಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು `ಡಾನ್' ವರದಿ ಮಾಡಿದೆ.
ಬಾಂಬ್ ದಾಳಿಯನ್ನು ಖಂಡಿಸಿರುವ ಖೈಬರ್ ಪಖ್ತೂಂಕ್ವಾ ಪ್ರಾಂತದ ಉಸ್ತುವಾರಿ ಮುಖ್ಯಮಂತ್ರಿ ಅರ್ಷದ್ ಹುಸೇನ್ ಶಾ, ಇಂತಹ ಹೇಡಿತನದ ಘಟನೆಗಳಿಂದ ಪೊಲೀಸರ ನೈತಿಕ ಸ್ಥೈರ್ಯ ಸೋಲುವುದಿಲ್ಲ ಎಂದಿದ್ದಾರೆ.
Next Story





