ಇಮ್ರಾನ್ ಖಾನ್, ಪತ್ನಿ ಬುಶ್ರಾರನ್ನು ಏಕಾಂತ ಬಂಧನದಲ್ಲಿರಿಸದಂತೆ ಪಾಕ್ ನ್ಯಾಯಾಲಯ ಆದೇಶ

ಇಮ್ರಾನ್ ಖಾನ್ , ಬುಶ್ರಾ ಬೀಬಿ | Photo Credit : indiatoday.in
ಇಸ್ಲಾಮಾಬಾದ್, ಸೆ. 1: ಬಂಧನದಲ್ಲಿರುವ ಮಾಜಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ಇನ್ನು ಮುಂದೆ ಏಕಾಂತ ಬಂಧನದಲ್ಲಿರಿಸುವುದನ್ನು ಇಸ್ಲಾಮಾಬಾದ್ ಹೈಕೋರ್ಟ್ (IHC) ನಿಷೇಧಿಸಿದೆ. ಜೈಲಿನ ಕಾನೂನುಗಳ ಪ್ರಕಾರ ಇಮ್ರಾನ್ ಹಾಗೂ ಅವರ ಪತ್ನಿ ಪರಸ್ಪರ ಭೇಟಿಯಾಗಲು ಅವಕಾಶ ನೀಡುವಂತೆಯೂ ನ್ಯಾಯಾಲಯವು, ಅವರು ಬಂಧನದಲ್ಲಿರುವ ಅದಿಯಾಲ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
73 ವರ್ಷದ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ಪ್ರಸಕ್ತ ರಾವಲ್ಪಿಂಡಿಯ ಅದಿಯಾಲ ಜೈಲಿನಲ್ಲಿರಿಸಲಾಗಿದ್ದು, ಭ್ರಷ್ಟಾಚಾರ ಹಾಗೂ ಅದಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುದೀರ್ಘವಾದ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ. ಪಾಕಿಸ್ತಾನದ ತೆಹ್ರಿಕೆ ಇನ್ಸಾಫ್ ಪಕ್ಷದ ಸಂಸ್ಥಾಪಕರೂ ಆಗಿರುವ ಇಮ್ರಾನ್ ಖಾನ್ ಅವರನ್ನು ಏಕಾಂತ ಬಂಧನದಲ್ಲಿರಿಸಿರುವುದನ್ನು ಪ್ರಶ್ನಿಸಿ ಅವರ ಸೋದರಿ ಅಲೀಮಾ ಖಾನ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬುಶ್ರಾ ಬೀಬಿ ಅವರ ಏಕಾಂತ ಬಂಧನವನ್ನು ಪ್ರಶ್ನಿಸಿ ಪುತ್ರಿ ಮಬಾಶರಾ ಖಾವರ್ ಮನೆಕಾ ಅರ್ಜಿ ಸಲ್ಲಿಸಿದ್ದರು.
ಜೈಲು ನಿಯಮಗಳಡಿ ಇಮ್ರಾನ್ ಖಾನ್ರನ್ನು ಅವರ ಕುಟುಂಬಿಕರು ಭೇಟಿಯಾಗುವುದಕ್ಕೆ ಅನುಮತಿ ನೀಡುವಂತೆಯೂ ನ್ಯಾಯಮೂರ್ತಿ ಖಾದಿಮ್ ಹುಸೈನ್ ಆದೇಶದಲ್ಲಿ ತಿಳಿಸಿದ್ದಾರೆ. ಇಮ್ರಾನ್ ಹಾಗೂ ಅವರ ಪುತ್ರರ ನಡುವೆ ದೂರವಾಣಿ ಸಂಭಾಷಣೆಗೂ ಏರ್ಪಾಡುಗಳನ್ನು ಮಾಡುವಂತೆಯೂ ಜೈಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಇಮ್ರಾನ್ ಖಾನ್ ಅವರಿಗೆ ನಿತ್ಯವೂ ಸುದ್ದಿಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಒದಗಿಸಬೇಕು ಮತ್ತು ಜೈಲು ನಿಯಮಗಳಿಗನುಗುಣವಾಗಿ ವೈದ್ಯಕೀಯ ಸೌಲಭ್ಯಗಳು ಅವರಿಗೆ ದೊರೆಯುವಂತೆ ನೋಡಿಕೊಳ್ಳಬೇಕೆಂದು ನ್ಯಾಯಾಲಯ ತಿಳಿಸಿದೆ. ನ್ಯಾಯಾಲಯದ ನಿರ್ದೇಶನಗಳ ಅನುಷ್ಠಾನವನ್ನು ಖಾತರಿಪಡಿಸುವಂತೆ ಹಾಗೂ 15 ದಿನಗಳೊಳಗೆ ಅನುಸರಣಾ ವರದಿಯನ್ನು ಸಲ್ಲಿಸುವಂತೆ ಅದಿಯಾಲ ಜೈಲಿನ ಆಧೀಕ್ಷಕರಿಗೆ ನ್ಯಾಯಾಲಯ ಸೂಚಿಸಿದೆ.






