ಪಾಕ್ ನಲ್ಲಿರುವ ಎಲ್ಲಾ ಅಫ್ಘನ್ನರೂ ತಾಯ್ನಾಡಿಗೆ ಮರಳಬೇಕು: ಪಾಕ್ ರಕ್ಷಣಾ ಸಚಿವ ಖ್ವಾಜಾ

ಆಸಿಫ್ ಖ್ವಾಜಾ | Photo Credit : PTI
ಇಸ್ಲಾಮಾಬಾದ್, ಅ.18: ನೆರೆಯ ಅಫ್ಘಾನಿಸ್ತಾನದೊಂದಿಗಿನ ಹಳೆಯ ಸಂಬಂಧಗಳ ಯುಗ ಮುಗಿದಿದೆ. ಪಾಕಿಸ್ತಾನದಲ್ಲಿ ವಾಸಿಸುವ ಎಲ್ಲಾ ಅಫ್ಘನ್ನರೂ ತಮ್ಮ ತಾಯ್ನಾಡಿಗೆ ಹಿಂತಿರುಗಬೇಕು. ಅಲ್ಲಿ ಅವರು ತಮ್ಮದೇ ಆದ ಸರ್ಕಾರವನ್ನು ಹೊಂದಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಆಸಿಫ್ ಖ್ವಾಜಾ ಹೇಳಿದ್ದಾರೆ.
ಈ ರಾಷ್ಟ್ರದ ಭೂಮಿ ಮತ್ತು ಸಂಪನ್ಮೂಲಗಳು 250 ದಶಲಕ್ಷ ಪಾಕಿಸ್ತಾನೀಯರಿಗೆ ಸೇರಿದ್ದು, ಅಫ್ಘಾನ್ ಗಳಿಗಲ್ಲ. ಪಾಕಿಸ್ತಾನದ ನೆಲದಲ್ಲಿರುವ ಎಲ್ಲಾ ಅಫ್ಘಾನಿಸ್ತಾನೀಯರೂ ತಮ್ಮ ತಾಯ್ನಾಡಿಗೆ ತಕ್ಷಣ ಮರಳಬೇಕು ಎಂದು ಆಸಿಫ್ ಹೇಳಿರುವುದಾಗಿ ವರದಿಯಾಗಿದೆ.
ಹಲವು ವರ್ಷಗಳಿಂದ ಪಾಕಿಸ್ತಾನ ಸಂಯಮ, ತಾಳ್ಮೆ ತೋರಿದೆ. ಆದರೆ ಅಫ್ಘಾನಿಸ್ತಾನದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಪುನರಾವರ್ತಿತ ಗಡಿಯಾಚೆಗಿನ ಭಯೋತ್ಪಾದಕ ಘಟನೆಗಳ ಬಗ್ಗೆ ಪಾಕಿಸ್ತಾನ 836 ಪ್ರತಿಭಟನಾ ಟಿಪ್ಪಣಿಗಳನ್ನು ಮತ್ತು 13 ರಾಜತಾಂತ್ರಿಕ ಮನವಿಗಳನ್ನು ರವಾನಿಸಿದೆ. ಇನ್ನು ಮುಂದೆ ಪ್ರತಿಭಟನಾ ಟಿಪ್ಪಣಿ ಕಳುಹಿಸುವುದಿಲ್ಲ ಮತ್ತು ಶಾಂತಿಗೆ ಮನವಿ ಮಾಡುವುದಿಲ್ಲ. ಭಯೋತ್ಪಾದನೆಯ ಮೂಲಗಳು ಎಲ್ಲಿಯೇ ಇದ್ದರೂ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಭಾರತದ `ಪ್ರಾಕ್ಸಿ'ಯಂತೆ ವರ್ತಿಸುತ್ತಿರುವ ತಾಲಿಬಾನ್ ಸರಕಾರ ಭಾರತದೊಂದಿಗೆ ಮತ್ತು ನಿಷೇಧಿತ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ(ಟಿಟಿಪಿ) ಜೊತೆ ಸೇರಿಕೊಂಡು ಪಾಕಿಸ್ತಾನದ ವಿರುದ್ಧ ಪಿತೂರಿ ನಡೆಸುತ್ತಿದೆ. ಈಗ ಭಾರತದ ತೊಡೆಯಲ್ಲಿ ಕುಳಿತು ನಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವ ಅಫ್ಘಾನ್ ಆಡಳಿತಾಗಾರರು ಈ ಹಿಂದೊಮ್ಮೆ ನಮ್ಮ ರಕ್ಷಣೆಯಲ್ಲಿ ನಮ್ಮ ದೇಶದಲ್ಲಿ ಅಡಗಿ ಕುಳಿತಿದ್ದರು ಎಂದು ಖ್ವಾಜಾ ಆಸಿಫ್ ಹೇಳಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನ ತನ್ನನ್ನು ರಕ್ಷಿಸಿಕೊಳ್ಳಲು ಸಿದ್ಧವಾಗಿದೆ. ಗಡಿಯಾಚೆಗಿನ ಯಾವುದೇ ಆಕ್ರಮಣವನ್ನು ದೃಢವಾದ ಪ್ರತಿಕ್ರಮದೊಂದಿಗೆ ಎದುರಿಸಲಾಗುವುದು ಎಂದು ಆಸಿಫ್ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.







