ಭಾರತದ ಜೊತೆ ಯುದ್ಧದ ಸಾಧ್ಯತೆ ವಾಸ್ತವ: ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

ಖ್ವಾಜಾ ಆಸೀಫ್ | Photo Credit : ddnews.gov.in
ಇಸ್ಲಾಮಾಬಾದ್,ಅ.8: ಭಾರತದ ಜೊತೆಗೆ ಯುದ್ಧ ನಡೆಯುವ ಸಾಧ್ಯತೆ ವಾಸ್ತವವಾದುದೆಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ.
ಒಂದು ವೇಳೆ ಭಾರತದ ಜೊತೆಗೆ ಭವಿಷ್ಯದಲ್ಲಿ ಯಾವುದೇ ಸಶಸ್ತ್ರ ಸಂಘರ್ಷ ಏರ್ಪಟ್ಟಲ್ಲಿ ತನ್ನ ದೇಶವು ದೊಡ್ಡ ಯಶಸ್ಸನ್ನು ಸಾಧಿಸಲಿದೆಯೆಂದು ಅವರು ಹೇಳಿದ್ದಾರೆ.
ಸಾಮಾ ಟಿವಿಗೆ ಮಂಗಳವಾರ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಭಾರತದಿಂದ ಸಶಸ್ತ್ರ ಸಂಘರ್ಷದ ಬೆದರಿಕೆಯಿದ್ದು, ಪಾಕಿಸ್ತಾನವು ಪರಿಸ್ಥಿತಿಯ ಬಗ್ಗೆ ನಿಗಾ ಇರಿಸಿದೆ ಎಂದರು.
‘‘ನಾನು ಯುದ್ಧ ನಡೆಯುವುದನ್ನು ಬಯಸುವುದಿಲ್ಲ. ಆದರೆ ಯುದ್ಧದ ಆಪಾಯಗಳು ವಾಸ್ತವವಾದುದಾಗಿದೆ ಎಂಬುದನ್ನು ನಾನು ನಿರಾಕರಿಸುವುದಿಲ್ಲ. ಹಿಂದಿಗಿಂತ ನಾವು ಉತ್ತಮ ಫಲಿತಾಂಶವನ್ನು ಸಾಧಿಸಲಿದ್ದೇವೆ’’ ಎಂದವರು ಹೇಳಿದ್ದಾರೆ.
ಪಾಕಿಸ್ತಾನವು ಈಗ ಆರು ತಿಂಗಳುಗಳ ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಹಾಗೂ ಮಿತ್ರನ್ನು ಹೊಂದಿದೆ ಎಂದವರು ಉಲ್ಲೇಖಿಸಿದ್ದಾರೆ.
ಮುಗಲ್ ಚಕ್ರವರ್ತಿ ಔರಂಗಜೇಬ್ ನ ಆಡಳಿತವನ್ನು ಹೊರತುಪಡಿಸಿ ಭಾರತವು ಎಂದೂ ಒಂದು ರಾಷ್ಟ್ರವಾಗಿ ಒಗ್ಗೂಡಿರಲಿಲ್ಲ. ಆದರೆ ಪಾಕಿಸ್ತಾನವು ಹಲವಾರು ಆಂತರಿಕ ಸಮಸ್ಯೆಗಳ ಹೊರತಾಗಿಯೂ ಮೇ ತಿಂಗಳ ಸಂಘರ್ಷವನ್ನು ಅದು ಒಗ್ಗಟ್ಟಿನಿಂದ ಎದುರಿಸಿ ನಿಂತಿದೆ ಎಂದರು.





