ಭಯೋತ್ಪಾದನೆ ಸಂಬಂಧಿ 4 ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಪಾಕ್ ವಿಫಲ ಯತ್ನ; ದಕ್ಕಿದ್ದು ಒಂದೇ ಹುದ್ದೆ

ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್PC: x.com/Adv_AarfaKhanam
ಹೊಸದಿಲ್ಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಹೊಂದಿರದ ಪಾಕಿಸ್ತಾನ, ಭಯೋತ್ಪಾದನೆಗೆ ಸಂಬಂಧಿಸಿದ ಮಂಡಳಿಯ ನಾಲ್ಕು ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ನಡೆಸಿದ ಯತ್ನ ವಿಫಲವಾಗಿದ್ದು, 1988ರ ತಾಲಿಬಾನ್ ನಿರ್ಬಂಧ ಸಮಿತಿಯ ಮುಖ್ಯಸ್ಥ ಹುದ್ದೆಗೆ ತೃಪ್ತಿಪಟ್ಟುಕೊಂಡಿದೆ.
1267 ನಿರ್ಬಂಧ ಸಮಿತಿ, 1550 (ಪ್ರಸರಣ ರಹಿತ) ನಿರ್ಬಂಧ ಸಮಿತಿ, 1988 ತಾಲಿಬಾನ್ ಸಮಿತಿ ಮತ್ತು 1373 ಭಯೋತ್ಪಾದನೆ ನಿಗ್ರಹ ಸಮಿತಿ (ಸಿಟಿಸಿ) ಅಧ್ಯಕ್ಷ ಸ್ಥಾನಕ್ಕೆ ಪಾಕಿಸ್ತಾನ ಪಟ್ಟು ಹಿಡಿದಿತ್ತು. ತಾಲಿಬಾನ್ ಸಮಿತಿ ಹೊರತುಪಡಿಸಿ ಸಿಟಿಸಿಯ ಉಪಾಧ್ಯಕ್ಷ ಹುದ್ದೆಯೂ ಪಾಕಿಸ್ತಾನಕ್ಕೆ ದಕ್ಕಿದೆ. ನೆರೆಯ ರಾಷ್ಟ್ರದ ಭಾರಿ ನಿರೀಕ್ಷೆ ಮತ್ತು ಪ್ರತಿಪಾದನೆ ನಿರೀಕ್ಷಿತ ಫಲ ನೀಡಿಲ್ಲ ಎನ್ನುವುದು ಭಾರತದ ಅಭಿಮತ.
ಪಾಕಿಸ್ತಾನದ ಬೇಡಿಕೆಗೆ ಭದ್ರತಾ ಮಂಡಳಿಯಲ್ಲಿ ಸಹಮತದ ಕೊರತೆ ವ್ಯಕ್ತವಾಗಿದ್ದು, ವಿಶ್ವಸಂಸ್ಥೆ ಸಮಿತಿಗಳ ಹಂಚಿಕೆಯ ಪ್ರಕ್ರಿಯೆಯಲ್ಲಿ ಐದು ತಿಂಗಳು ವಿಳಂವಾಗಿದೆ. ಈ ಹಂಚಿಕೆಗಳು 2025ರ ಜನವರಿ ವೇಳೆಗೆ ಆಗಬೇಕಿತ್ತು ಎಂದು ಉನ್ನತ ಮೂಲಗಳು ಹೇಳಿವೆ. ಪಾಕಿಸ್ತಾನದ ಬೇಡಿಕೆ ಬಗ್ಗೆ ಸಹಮತದ ಕೊರತೆ ಮತ್ತು ಪಾಕಿಸ್ತಾನದ ಅತಾರ್ಕಿಕ ಬೇಡಿಕೆಗಳು ಇಡೀ ಪ್ರಕ್ರಿಯೆ ಜೂನ್ ವರೆಗೆ ವಿಳಂಬವಾಗಲು ಕಾರಣವಾಯಿತು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಯೋತ್ಪಾದನೆ ವಿಷಯದಲ್ಲಿ ಭಾರತವನ್ನು ಗುರಿ ಮಾಡುವ ಪಾಕಿಸ್ತಾನದ ಯಾವುದೇ ಪ್ರಯತ್ನಗಳಿಗೆ ಇತರ ಸದಸ್ಯರಿಗೆ ತಡೆಯಾಗುವ ನಿರೀಕ್ಷೆ ಇದೆ. ಎಲ್ಲವೂ ಸಹಮತದಿಂದ ಕಾರ್ಯಾಚರಣೆ ಮಾಡಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಸಮಿತಿಗಳಿಗೆ ವಿಶೇಷ ಮಹತ್ವ ಇಲ್ಲ ಎಂಬ ಕಾರಣಕ್ಕೆ ಖಾಯಂ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್, ರಷ್ಯಾ, ಅಮೆರಿಕ ಮತ್ತು ಬ್ರಿಟನ್ ಈ ಸಮಿತಿಗಳ ಬಗ್ಗೆ ವಿಶೇಷ ಆಸಕ್ತಿ ತೋರಿಸಿಲ್ಲ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.







