ಭಾರತ - ಪಾಕ್ ನಡುವೆ ಕದನ ವಿರಾಮವೇರ್ಪಡಿಸಿದ್ದು ಟ್ರಂಪ್ ಎಂದ ಪಾಕ್ ವಿದೇಶಾಂಗ ಸಚಿವ!
ಭಾರತದ ಜೊತೆ ಮಾತುಕತೆಗೆ ಸಿದ್ಧ: ಪಾಕ್ ವಿದೇಶಾಂಗ ಸಚಿವ ಇಷಾಕ್ ದಾರ್

ಪಾಕಿಸ್ತಾನದ ವಿದೇಶಾಂಗ ಸಚಿವ ಇಷಾಕ್ ದಾರ್ | PC : @ForeignOfficePk
ವಾಷಿಂಗ್ಟನ್, ಜು.26: ವ್ಯಾಪಾರ, ಆರ್ಥಿಕ ಸಹಕಾರ, ಭಯೋತ್ಪಾದನೆ ನಿಗ್ರಹ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಭಾರತದ ಜೊತೆ ಮಾತುಕತೆಗೆ ಪಾಕಿಸ್ತಾನ ಸಿದ್ಧವಿದೆ. ಚೆಂಡು ಈಗ ಭಾರತದ ಅಂಗಳದಲ್ಲಿದ್ದು ಅವರಿಂದ ಔಪಚಾರಿಕ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಷಾಕ್ ದಾರ್ ಹೇಳಿದ್ದಾರೆ.
ಭಾರತದೊಂದಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸಹಕರಿಸಲು ಮತ್ತು ಕೆಲಸ ಮಾಡಲು ಪಾಕಿಸ್ತಾನ ಸಿದ್ಧವಿದೆ. ಆದರೆ ಅರ್ಥಪೂರ್ಣ ಮಾತುಕತೆಯ ಅಗತ್ಯವಿದೆ ಎಂದು ದಾರ್ ಹೇಳಿದ್ದಾರೆ. ಅಮೆರಿಕದೊಂದಿಗೆ ಸುಂಕ ಮತ್ತು ತೆರಿಗೆ ಮಾತುಕತೆಗಾಗಿ ವಾಷಿಂಗ್ಟನ್ ತಲುಪಿರುವ ದಾರ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಕುರಿತ ಪ್ರಶ್ನೆಗೆ `ಎರಡು ಪರಮಾಣು ಶಸ್ತ್ರಸಜ್ಜಿತ ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆಗೊಳಿಸಿ ಕದನ ವಿರಾಮ ಏರ್ಪಡುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ' ಎಂದು ಶ್ಲಾಘಿಸಿದ್ದಾರೆ.
ಪಹಲ್ಗಾಮ್ ದಾಳಿಯ ಹೊಣೆ ವಹಿಸಿಕೊಂಡಿದ್ದ `ದಿ ರೆಸಿಸ್ಟೆಂಟ್ ಫ್ರಂಟ್'(ಟಿಆರ್ಎಫ್) ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ನಿಯೋಜಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ದಾರ್ `ಅಮೆರಿಕದ ನಿರ್ಧಾರದ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಟಿಆರ್ಎಫ್ ಅನ್ನು ಲಷ್ಕರೆ ತಯ್ಯಿಬ ಜೊತೆ ಜೋಡಿಸುವುದು ಸರಿಯಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ.





