ಪಾಕಿಸ್ತಾನ ವಿಫಲ ರಾಷ್ಟ್ರ: ವಿಶ್ವಸಂಸ್ಥೆಯಲ್ಲಿ ಭಾರತದ ವಾಗ್ದಾಳಿ

PC | NDTV
ವಿಶ್ವಸಂಸ್ಥೆ: ಪಾಕಿಸ್ತಾನ ಒಂದು ವಿಫಲ ರಾಷ್ಡ್ರವಾಗಿದ್ದು ಅಂತರಾಷ್ಟ್ರೀಯ ನೆರವಿನಿಂದ ಉಳಿದುಕೊಂಡಿದೆ ಎಂದು ಗುರುವಾರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಾಗ್ದಾಳಿ ನಡೆಸಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ(ಯುಎನ್ಎಚ್ಆರ್ಸಿ)ಯ 58ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಕಾಯಂ ನಿಯೋಗದ ಪ್ರತಿನಿಧಿ ಕ್ಷಿತಿಜ್ ತ್ಯಾಗಿ "ಪಾಕಿಸ್ತಾನಿ ನಾಯಕತ್ವವು ಅವರ ಮಿಲಿಟರಿ-ಭಯೋತ್ಪಾದಕ ವ್ಯವಸ್ಥೆಯಿಂದ ನಿರ್ದೇಶಿಸಲ್ಪಟ್ಟ ಸುಳ್ಳನ್ನು ಹರಡುತ್ತಿದೆ. ಪಾಕಿಸ್ತಾನದ ನಾಯಕರು ಮತ್ತು ನಿಯೋಗವು ಅದರ ಮಿಲಿಟರಿ-ಭಯೋತ್ಪಾದಕ ವ್ಯವಸ್ಥೆಯಿಂದ ಹಸ್ತಾಂತರಿಸಲ್ಪಟ್ಟ ಸುಳ್ಳನ್ನು ಹರಡುವುದನ್ನು ಮುಂದುವರಿಸುತ್ತಿರುವುದು ವಿಷಾದನೀಯವಾಗಿದೆ. ವಿಫಲ ರಾಷ್ಟ್ರ , ಅಂತರಾಷ್ಟ್ರೀಯ ದೇಣಿಗೆಯಿಂದ ಬದುಕುಳಿದ ದೇಶದಿಂದ ಈ ಸಮಿತಿಯ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಅಸಮರ್ಥತೆಯ ಆಡಳಿತ ಮತ್ತು ಅಮಾನವೀಯ ಕಾರ್ಯಗಳನ್ನೇ ಮುನ್ನಡೆಸುತ್ತಾ ಬಂದಿರುವ ಈ ದೇಶವು ಪ್ರಜಾಪ್ರಭುತ್ವ, ಅಭಿವೃದ್ಧಿ ಮತ್ತು ಜನರಿಗೆ ಘನತೆಯನ್ನು ಖಾತರಿಪಡಿಸುವ ಭಾರತದಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.





