ಏಕಪಕ್ಷೀಯ, ದಾರಿತಪ್ಪಿಸುವ ಹೇಳಿಕೆ: ಗಡಿಯಾಚೆಗಿನ ಭಯೋತ್ಪಾದನೆ ಕುರಿತ ಭಾರತ- ಅಮೆರಿಕ ಜಂಟಿ ಹೇಳಿಕೆಗೆ ಪಾಕ್ ಟೀಕೆ

Photo credit: X/@narendramodi
ಇಸ್ಲಮಾಬಾದ್ : ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಭೆಯ ಬಳಿಕ ಹೊರಡಿಸಿದ ಜಂಟಿಹೇಳಿಕೆಯಲ್ಲಿ ಪಾಕಿಸ್ತಾನದ ನೆಲವನ್ನು ಗಡಿಯಾಚೆಗಿನ ಭಯೋತ್ಪಾದನೆಗೆ ನೆಲೆಯಾಗಿ ಬಳಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಮಾಡಿರುವ ಆಗ್ರಹ ಏಕಪಕ್ಷೀಯ ಮತ್ತು ದಾರಿತಪ್ಪಿಸುವ ಪ್ರತಿಪಾದನೆಯಾಗಿದೆ ಎಂದು ಪಾಕಿಸ್ತಾನ ಶುಕ್ರವಾರ ಪ್ರತಿಕ್ರಿಯಿಸಿದೆ.
ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸಿರುವುದು ಏಕಪಕ್ಷೀಯ, ದಾರಿ ತಪ್ಪಿಸುವ ಮತ್ತು ರಾಜತಾಂತ್ರಿಕ ಶಿಷ್ಟಾಚಾರಕ್ಕೆ ವಿರುದ್ಧವಾದ ಪ್ರಕ್ರಿಯೆಯಾಗಿದೆ. ಜಂಟಿ ಹೇಳಿಕೆಯು ಪಾಕಿಸ್ತಾನದ ತ್ಯಾಗವನ್ನು ಗಮನಿಸಿಲ್ಲ ಹಾಗೂ ಭಯೋತ್ಪಾದನೆಯನ್ನು ಪ್ರಾಯೋಜಿಸುವಲ್ಲಿ ಮತ್ತು ಕಾನೂನುಬಾಹಿರ ಹತ್ಯೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಮರೆಮಾಚಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರರು ಆರೋಪಿಸಿದ್ದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯವನ್ನು ಪಾಲಿಸಲೂ ಭಾರತ ವಿಫಲವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ನೆಲ, ವಾಯು, ಸಮುದ್ರ, ಬಾಹ್ಯಾಕಾಶ ಮತ್ತು ಸೈಬರ್ ಕ್ಷೇತ್ರದಲ್ಲಿ ಮಿಲಿಟರಿ ಸಹಕಾರವನ್ನು ವೃದ್ಧಿಸಲು ಭಾರತ ಮತ್ತು ಅಮೆರಿಕ ಯೋಜಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ `ಅಮೆರಿಕದಿಂದ ಭಾರತಕ್ಕೆ ಶಕ್ತಿಯನ್ನು ವರ್ಗಾಯಿಸುವ ಯೋಜನೆಯು ಅತ್ಯಂತ ಕಳವಳಕಾರಿಯಾಗಿದ್ದು ಇಂತಹ ಕೃತ್ಯಗಳು ಈ ವಲಯದಲ್ಲಿ ಶಕ್ತಿಯ ಅಸಮತೋಲನಕ್ಕೆ ಕಾರಣವಾಗುತ್ತದೆ' ಎಂದು ಹೇಳಿದೆ.





