ಅಂತರಾಷ್ಟ್ರೀಯ ಮಾಧ್ಯಮವನ್ನು ಎಲ್ಒಸಿಗೆ ಕರೆದೊಯ್ದ ಪಾಕಿಸ್ತಾನ; ಭಯೋತ್ಪಾದಕ ಶಿಬಿರಗಳು ಅಸ್ತಿತ್ವದಲ್ಲಿಲ್ಲ ಎಂದು ಪ್ರತಿಪಾದನೆ

ಸಾಂದರ್ಭಿಕ ಚಿತ್ರ | Photo : telegraphindia
ಇಸ್ಲಮಾಬಾದ್: ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಅತಾವುಲ್ಲಾ ತರಾರ್ ಸೋಮವಾರ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳೊಂದಿಗೆ ನಿಯಂತ್ರಣ ರೇಖೆಗೆ ಭೇಟಿ ನೀಡಿದ್ದು ಭಯೋತ್ಪಾದಕ ಶಿಬಿರಗಳೆಂದು ಭಾರತ ಗುರುತಿಸುವ ಸ್ಥಳಗಳು `ವಾಸ್ತವವಾಗಿ ನಾಗರಿಕ ಪ್ರದೇಶಗಳಾಗಿವೆ' ಎಂದು ಪ್ರತಿಪಾದಿಸಿದ್ದಾರೆ.
ʼಭಾರತದ ಸುಳ್ಳು ಹೇಳಿಕೆಯನ್ನು ಬಹಿರಂಗಪಸುವ ಉದ್ದೇಶದ ' ಭೇಟಿಯನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆ ಆಯೋಜಿಸಿತ್ತು ಮತ್ತು ಮಾಧ್ಯಮದ ಪ್ರತಿನಿಧಿಗಳು `ಸ್ಥಳೀಯ ಜನಸಮುದಾಯದ' ಜೊತೆ ಸಂವಹನ ನಡೆಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಳಿಕ ವರದಿಗಾರರ ಜೊತೆ ಮಾತನಾಡಿದ ಸಚಿವ ತರಾರ್ `ಭಯೋತ್ಪಾದಕ ಶಿಬಿರಗಳ ಬಗ್ಗೆ ಭಾರತದ ಆಪಾದನೆಗಳು ಆಧಾರರಹಿತವಾಗಿವೆ. ಪಾಕಿಸ್ತಾನವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮದ ಎದುರು ಎಲ್ಲಾ ವಾಸ್ತವಗಳನ್ನು ತೆರೆದಿಟ್ಟಿದೆ' ಎಂದರು.
ಪಾಕಿಸ್ತಾನವು ಜವಾಬ್ದಾರಿಯುತ ದೇಶವಾಗಿದ್ದು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗಾಗಿ ಬದ್ಧವಾಗಿದೆ. ನಾವು ಶಾಂತಿಯ ಪ್ರತಿಪಾದಕರು ಎಂಬುದನ್ನು ನಮ್ಮ ಕೃತ್ಯಗಳ ಮೂಲಕ ಪದೇಪದೇ ಸಾಬೀತು ಪಡಿಸಿದ್ದೇವೆ. ಪಾಕಿಸ್ತಾನವು ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಯಾವ ಮಟ್ಟಕ್ಕೂ ಹೋಗುತ್ತದೆ' ಎಂದು ತರಾರ್ ಹೇಳಿರುವುದಾಗಿ ವರದಿಯಾಗಿದೆ.
ಈ ಮಧ್ಯೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ-ಪಾಕ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ ಸೋಮವಾರ ನಡೆದಿದೆ. `ಪ್ರಾದೇಶಿಕ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿರುವ ಜಮ್ಮು-ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆ ಕರೆಯಲು ಪಾಕಿಸ್ತಾನ ಔಪಚಾರಿಕ ಕೋರಿಕೆ ಸಲ್ಲಿಸಿದೆ ಎಂದು ವಿಶ್ವಸಂಸ್ಥೆಗೆ ಪಾಕಿಸ್ತಾನದ ಕಾಯಂ ಪ್ರತಿನಿಧಿ ಆಸಿಮ್ ಇಫ್ತಿಕಾರ್ ಅಹ್ಮದ್ ಹೇಳಿದ್ದಾರೆ.
ಪಾಕ್ ಪ್ರಧಾನಿ ಷರೀಫ್ ಮಲೇಶ್ಯಾ ಪ್ರವಾಸ ಮುಂದೂಡಿಕೆ:
ಭಾರತದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಶುಕ್ರವಾರ ನಿಗದಿಯಾಗಿದ್ದ ಮಲೇಶ್ಯಾ ಪ್ರವಾಸವನ್ನು ಪಾಕ್ ಪ್ರಧಾನಿ ಶಹಬಾಝ್ ಷರೀಫ್ ಮುಂದೂಡಿರುವುದಾಗಿ ಮಲೇಶ್ಯಾ ಪ್ರಧಾನಿಯವರ ಕಚೇರಿ ಹೇಳಿದೆ.
ಮಲೇಶ್ಯಾ ಮತ್ತು ಪಾಕಿಸ್ತಾನದ ನಾಯಕರು ರವಿವಾರ ರಾತ್ರಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವರ್ಷಾಂತ್ಯಕ್ಕೆ ಮಲೇಶ್ಯಾಕ್ಕೆ ಅಧಿಕೃತ ಭೇಟಿ ನೀಡಲು ಬಯಸಿರುವುದಾಗಿ ಪಾಕ್ ಪ್ರಧಾನಿ ಹೇಳಿದ್ದಾರೆ' ಎಂದು ಹೇಳಿಕೆ ತಿಳಿಸಿದೆ.







