ಕದನ ವಿರಾಮ ಕುರಿತು ಮುಂದಿನ ಮಾತುಕತೆ| ಅಮೆರಿಕ, ಇರಾನ್ ನಿಯೋಗವನ್ನು ಇಸ್ಲಾಮಾಬಾದ್ಗೆ ಆಹ್ವಾನಿಸಿದ ಪಾಕ್ ಪ್ರಧಾನಿ ಶಹಬಾಝ್ ಷರೀಫ್

Photo credit: AFP
ಇಸ್ಲಾಮಾಬಾದ್,ಎ.8: ಲೆಬನಾನ್ ಸೇರಿದಂತೆ ಎಲ್ಲೆಡೆ ತಕ್ಷಣದ ಕದನ ವಿರಾಮಕ್ಕೆ ಅಮೆರಿಕ,ಇರಾನ್ ಮತ್ತು ಅವುಗಳ ಮಿತ್ರದೇಶಗಳು ಒಪ್ಪಿಕೊಂಡಿವೆ ಎಂದು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಪ್ರಕಟಿಸಿದ್ದಾರೆ.
ಎಲ್ಲ ವಿವಾದಗಳನ್ನು ಇತ್ಯರ್ಥಗೊಳಿಸಲು ನಿರ್ಣಾಯಕ ಒಪ್ಪಂದಕ್ಕಾಗಿ ಇನ್ನಷ್ಟು ಮಾತುಕತೆಗಳನ್ನು ನಡೆಸಲು ಅಮೆರಿಕ ಮತ್ತು ಇರಾನ್ ನಿಯೋಗಗಳನ್ನು ಎ.10ರಂದು ಇಸ್ಲಾಮಾಬಾದ್ಗೆ ಅಹ್ವಾನಿಸಲಾಗಿದೆ ಎಂದು ಷರೀಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕದನ ವಿರಾಮದ ಜಾಣತನದ ಹೆಜ್ಜೆಯನ್ನು ತಾನು ಸ್ವಾಗತಿಸುವುದಾಗಿ ತಿಳಿಸಿರುವ ಷರೀಫ್, ಉಭಯ ದೇಶಗಳ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
‘‘ಎರಡೂ ದೇಶಗಳು ಗಮನಾರ್ಹ ಬುದ್ಧಿವಂತಿಕೆ ಮತ್ತು ತಿಳುವಳಿಕೆಯನ್ನು ಪ್ರದರ್ಶಿಸಿವೆ. ಶಾಂತಿ ಮತ್ತು ಸ್ಥಿರತೆಗಾಗಿ ಪ್ರಯತ್ನಗಳನ್ನು ಮುಂದುವರಿಸುವಲ್ಲಿ ರಚನಾತ್ಮಕವಾಗಿ ತೊಡಗಿಕೊಂಡಿವೆ. ಸುಸ್ಥಿರ ಶಾಂತಿಯನ್ನು ಸ್ಥಾಪಿಸುವಲ್ಲಿ ‘ಇಸ್ಲಾಮಾಬಾದ್ ಮಾತುಕತೆಗಳು’ ಯಶಸ್ವಿಯಾಗುತ್ತವೆ ಎಂದು ನಾವು ಪ್ರಾಮಾಣಿಕವಾಗಿ ಆಶಿಸುತ್ತೇವೆ ಮತ್ತು ಮುಂಬರುವ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಸುದ್ದಿಗಳನ್ನು ಹಂಚಿಕೊಳ್ಳಲು ಬಯಸಿದ್ದೇವೆ’’ ಎಂದು ಷರೀಫ್ ತಿಳಿಸಿದ್ದಾರೆ.
ಶುಕ್ರವಾರದಿಂದ ಮೊದಲ್ಗೊಂಡು ಇಸ್ಲಾಮಾಬಾದ್ನಲ್ಲಿ ಅಮೆರಿಕದ ಜೊತೆಗೆ ಮಾತುಕತೆಗಳನ್ನು ನಡೆಸುವುದಾಗಿ ತಿಳಿಸಿರುವ ಇರಾನಿನ ಪರಮೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯು,‘ಇದು ಯುದ್ಧದ ಅಂತ್ಯವನ್ನು ಸೂಚಿಸುವುದಿಲ್ಲ,ನಮ್ಮ ಕೈಗಳು ಬಂದೂಕಿನ ಟ್ರಿಗರ್ ಮೇಲೆಯೇ ಇರುತ್ತವೆ ಮತ್ತು ಶತ್ರುವು ಸಣ್ಣದೊಂದು ತಪ್ಪು ಮಾಡಿದರೂ ಪೂರ್ಣ ಶಕ್ತಿಯಿಂದ ಎದುರಿಸುತ್ತೇವೆ’ ಎಂದು ಹೇಳಿದೆ.
ಇಸ್ಲಾಮಾದ್ ಒಪ್ಪಂದ
ಅಮೆರಿಕ ಮತ್ತು ಇರಾನ್ ಅಧಿಕಾರಿಗಳ ನಡುವೆ ಮಾತುಕತೆಗಳು ಇಸ್ಲಾಮಾಬಾದ್ನಲ್ಲಿ ನಡೆಯುವ ಸಾಧ್ಯತೆಯಿದ್ದು, ಪಾಕಿಸ್ತಾನದ ಮಧ್ಯವರ್ತಿಗಳು ಉಪಸ್ಥಿತರಿರಲಿದ್ದಾರೆ ಎಂದು ಸುದ್ದಿಸಂಸ್ಥೆಯು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್, ಅಳಿಯ ಜೇರೆಡ್ ಕುಶ್ನೆರ್ ಮತ್ತು ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರು ಮಾತುಕತೆಗಳಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ವಾನ್ಸ್ ಪ್ರಸ್ತುತ ಹಂಗೇರಿ ಭೇಟಿಯಲ್ಲಿದ್ದು, ವರದಿಯ ಪ್ರಕಾರ ಸಮಯ ಹೊಂದಾಣಿಕೆಯಾದರೆ ಅವರು ಇಸ್ಲಾಮಾಬಾದ್ಗೆ ಆಗಮಿಸುವ ಸಾಧ್ಯತೆಯಿದೆ.







