ಪಾಕ್: ಮತಗಟ್ಟೆ ಅಕ್ರಮ ಆರೋಪ ಹಿಂಪಡೆದ ಲಿಯಾಕತ್ ಆಲಿ

ಲಿಯಾಕತ್ ಆಲಿ | Photo: ANI
ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಸಂದರ್ಭ ರಾವಲ್ಪಿಂಡಿ ನಗರದ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಗೆದ್ದಿರುವರೆಂದು ಘೋಷಿಸಲು ತಮ್ಮನ್ನು ಬಲವಂತಪಡಿಸಲಾಗಿದೆ ಎಂದು ಈ ಹಿಂದೆ ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುವುದಾಗಿ ಪಾಕಿಸ್ತಾನದ ಮಾಜಿ ಅಧಿಕಾರಿ ಲಿಯಾಕತ್ ಆಲಿ ಛತ್ತಾ ಹೇಳಿದ್ದಾರೆ.
“ತನ್ನ ಆರೋಪದ ಬಗ್ಗೆ ಅತ್ಯಂತ ನಾಚಿಕೆ ಮತ್ತು ಮುಜುಗುರಕ್ಕೆ ಒಳಗಾಗಿದ್ದೇನೆ. ನನ್ನ ಕಾರ್ಯಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತೇನೆ ಮತ್ತು ಯಾವುದೇ ರೀತಿಯ ಕಾನೂನು ಕ್ರಮಕ್ಕಾಗಿ ಅಧಿಕಾರಿಗಳ ಮುಂದೆ ಶರಣಾಗುತ್ತೇನೆ” ಎಂದು ರಾವಲ್ಪಿಂಡಿಯ ಮಾಜಿ ಆಯುಕ್ತ ಛತ್ತಾ ಹೇಳಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನದ ಮುಖ್ಯ ನ್ಯಾಯಾಧೀಶ(ಸಿಜೆಐ) ಖಾಜಿ ಫಯೆಜ್ ಇಸಾ ಅವರು ಮತಎಣಿಕೆ ಅಕ್ರಮಕ್ಕೆ ಅನುಕೂಲ ಮಾಡಿಕೊಟ್ಟಿದ್ದರು ಮತ್ತು ಮುಖ್ಯ ಚುನಾವಣಾ ಆಯುಕ್ತರೂ ಇದರಲ್ಲಿ ಶಾಮೀಲಾಗಿದ್ದರು. ಈ ಅಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದವರು ಶನಿವಾರ ಹೇಳಿದ್ದರು.
ಇದೀಗ ಈ ಹೇಳಿಕೆಯನ್ನು ವಾಪಾಸು ಪಡೆಯುವುದಾಗಿ ಆಲಿ ಹೇಳಿದ್ದಾರೆ. ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ಖಾನ್ ಅವರ ಪಿಟಿಐ ಪಕ್ಷ ತನಗೆ ಉನ್ನತ ಸ್ಥಾನಮಾನದ ಆಮಿಷ ಒಡ್ಡಿದ್ದರಿಂದ ಈ ಆರೋಪ ಮಾಡಿದ್ದೆ. ಫೆಬ್ರವರಿ 11ರಂದು ರಹಸ್ಯವಾಗಿ ಲಾಹೋರ್ ಗೆ ತೆರಳಿ ಪಿಟಿಐ ಮುಖಂಡರನ್ನು ಭೇಟಿಯಾಗಿದ್ದೆ. ಚುನಾವಣೆ ಮತ್ತು ಆ ಬಳಿಕದ ಮತ ಎಣಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಪಿಟಿಐ ಪಕ್ಷದ ಪ್ರತಿಪಾದನೆಯನ್ನು ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಮಾನ ನೀಡುವುದಾಗಿ ಅವರು ಆಮಿಷ ಒಡ್ಡಿದ್ದರು . ನಾನು ಶೀಘ್ರದಲ್ಲೇ ನಿವೃತ್ತಿಯಾಗಲಿರುವುದರಿಂದ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನದ ಕೊಡುಗೆಯನ್ನು ನಿರಾಕರಿಸಲು ಮನಸ್ಸಾಗಲಿಲ್ಲ. ಸಿಜೆಐ, ಚುನಾವಣಾ ಅಧಿಕಾರಿಗಳ ಹೆಸರನ್ನೂ ಆರೋಪದಲ್ಲಿ ಉಲ್ಲೇಖಿಸುವ ಮೂಲಕ ಈ ಉನ್ನತ ಸ್ಥಾನಮಾನಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಹುಟ್ಟಿಸುವ ತಂತ್ರ ಅವರದ್ದಾಗಿತ್ತು ಎಂದು ಲಿಯಾಕತ್ ಆಲಿ ಹೇಳಿಕೆ ನೀಡಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ್ ಮುಸ್ಲಿಮ್ ಲೀಗ್ ನವಾಝ್ (ಪಿಎಂಎಲ್-ಎನ್) ಪಕ್ಷ, ಮಾಜಿ ಪ್ರಧಾನಿ ಇಮ್ರಾನ್ಖಾನ್ ಅವರ ಪಕ್ಷವು ಚುನಾವಣೆಯನ್ನು ವಿವಾದಾತ್ಮಕವಾಗಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. `ಪಿಟಿಐ ಪಕ್ಷಕ್ಕೆ ನಾಚಿಕೆಯಾಗಬೇಕು. ಅವರು ಚುನಾವಣೆಯನ್ನು ವಿವಾದಾತ್ಮಕವಾಗಿಸಲು ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನದ ಪ್ರತಿಷ್ಟೆಗೆ ಘಾಸಿ ಎಸಗಿದ್ದಾರೆ' ಎಂದು ಪಿಎಂಎಲ್-ಎನ್ ಪಕ್ಷ ಟೀಕಿಸಿದೆ.







