ಭಾರತಕ್ಕೆ ವಾಯುಪ್ರದೇಶ ಮುಚ್ಚಿ 2 ತಿಂಗಳಲ್ಲಿ 127 ಕೋಟಿ ಕಳೆದುಕೊಂಡ ಪಾಕಿಸ್ತಾನ

ಹೊಸದಿಲ್ಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರದ ಕ್ರಮವಾಗಿ ಭಾರತ ಏಪ್ರಿಲ್ 23ರಂದು ಸಿಂಧೂ ಜಲ ಒಪ್ಪಂದವನ್ನು ಭಾರತ ರದ್ದುಪಡಿಸಿದ ಮರುದಿನವೇ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಭಾರತೀಯ ವಿಮಾನಗಳಿಗೆ ಮುಚ್ಚಿದ ಪರಿಣಾಮ ಎರಡು ತಿಂಗಳಲ್ಲಿ 410 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಕಳೆದುಕೊಂಡಿದೆ ಎಂದು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನೀಡಿದ ಮಾಹಿತಿಯಿಂದ ಬಹಿರಂಗವಾಗಿದೆ.
ಏಪ್ರಿಲ್ 24ರಿಂದ ಜೂನ್ 30ರ ಅವಧಿಯಲ್ಲಿ ಭಾರತೀಯ ವಿಮಾನಗಳಿಗೆ ಅಂದರೆ ಭಾರತೀಯ ಕಂಪನಿಗಳು ಹೊಂದಿರುವ ಮತ್ತು ಲೀಸ್ ಆಧಾರದಲ್ಲಿ ನೀಡಿದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಪಾಕಿಸ್ತಾನ ಮುಚ್ಚಿದ್ದರಿಂದ ಈ ನಷ್ಟವಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಹೇಳಿದ್ದಾರೆ. ಪಾಕಿಸ್ತಾನದ ಈ ನಡೆಯಿಂದ ಭಾರತದ 100-150 ವಿಮಾನಗಳ ಹಾರಾಟಕ್ಕೆ ತೊಂದರೆಯಾಗಿದೆ.
ಈ ನಷ್ಟದ ಹೊರತಾಗಿಯೂ, ಪಾಕಿಸ್ತಾನ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಆದಾಯ 2019ರಲ್ಲಿ ಇದ್ದ 508000 ಡಾಲರ್ಗೆ ಹೋಲಿಸಿದರೆ 2025ರಲ್ಲಿ 760000 ಡಾಲರ್ ಗೆ ಹೆಚ್ಚಿದೆ. ವಾಯುಪ್ರದೇಶ ನಿರ್ಬಂಧಿಸುವ ವಿಚಾರ ಫೆಡರಲ್ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.
ಹಣಕಾಸು ವಿಚಾರದಲ್ಲಿ ನಷ್ಟ ಸಂಭವಿವಿಸಿದರೂ, ಇದನ್ನು ಆರ್ಥಿಕವಾಗಿ ನೋಡದೇ ದೇಶದ ಸಾರ್ವಭೌತ್ವ ಮತ್ತು ರಕ್ಷಣೆಯ ಅಂಶವನ್ನು ಪರಿಗಣಿಸಬೇಕು ಎಂದು ರಕ್ಷಣಾ ಸಚಿವರು ಹೇಳಿಕೆ ನೀಡಿದ್ದಾಗಿ 'ಡಾನ್' ವರದಿ ಮಾಡಿದೆ.
2019ರ ಗಡಿ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ 54 ದಶಲಕ್ಷ ಡಾಲರ್ ನಷ್ಟ ಅನುಭವಿಸಿತ್ತು. ಸದ್ಯದ ಆದೇಶದ ಪ್ರಕಾರ ಆಗಸ್ಟ್ ಕೊನೆಯವರೆಗೂ ಭಾರತೀಯ ವಿಮಾನಗಳಿಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಮುಚ್ಚಲಾಗಿದೆ.







