ಮುಂದಿನ 24ರಿಂದ 36 ಗಂಟೆಯಲ್ಲಿ ಮಿಲಿಟರಿ ಕ್ರಮ ಕೈಗೊಳ್ಳಲು ಭಾರತ ಯೋಜನೆ: ಪಾಕಿಸ್ತಾನದ ಸಚಿವರ ಪ್ರತಿಪಾದನೆ

ಅತಾವುಲ್ಲಾ ತರಾರ್ | PC : NDTV
ಇಸ್ಲಾಮಾಬಾದ್: ವಿಶ್ವಾಸಾರ್ಹ ಗುಪ್ತಚರ ವರದಿಗಳ ಪ್ರಕಾರ ಮುಂದಿನ 24ರಿಂದ 36 ಗಂಟೆಯಲ್ಲಿ ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಲು ಭಾರತ ಉದ್ದೇಶಿಸಿದೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಅತಾವುಲ್ಲಾ ತರಾರ್ ಪ್ರತಿಪಾದಿಸಿದ್ದಾರೆ.
ಭಾರತ ಮಿಲಿಟರಿ ಕ್ರಮ ಕೈಗೊಂಡರೆ ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಲಾಗುವುದು ಎಂದವರು ಎಚ್ಚರಿಕೆ ನೀಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕರ ದಾಳಿಗೆ ರಾಷ್ಟ್ರದ ಪ್ರತಿಕ್ರಿಯೆಯ ಕ್ರಮ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಭಾರತೀಯ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ನಂತರ ಪಾಕ್ ಸಚಿವರ ಹೇಳಿಕೆ ಹೊರಬಿದ್ದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನ ಒಳಗೊಂಡಿದೆ ಎಂಬ ಆಧಾರ ರಹಿತ ಆರೋಪಗಳ ಆಧಾರದಲ್ಲಿ ಭಾರತೀಯ ಪಡೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ. ಪಾಕಿಸ್ತಾನ ಸ್ವತಃ ಭಯೋತ್ಪಾದನೆಯ ಬಲಿಪಶುವಾಗಿದ್ದು ಈ ಸಂಕಟದ ನೋವನ್ನು ನಿಜವಾಗಿಯೂ ಅರ್ಥ ಮಾಡಿಕೊಳ್ಳುತ್ತದೆ. ಇದನ್ನು ನಾವು ಯಾವಾಗಲೂ ಖಂಡಿಸುತ್ತಾ ಬಂದಿದ್ದೇವೆ ಎಂದು ತರಾರ್ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಭಾರತ `ನ್ಯಾಯಾಧೀಶ, ತೀರ್ಪುಗಾರ ಮತ್ತು ಮರಣದಂಡನೆಕಾರರ ಪಾತ್ರವನ್ನು ನಿರ್ವಹಿಸುತ್ತಿದೆ. ಜವಾಬ್ದಾರಿಯುತ ರಾಷ್ಟ್ರವಾಗಿರುವುದರಿಂದ ಪಾಕಿಸ್ತಾನವು ಸತ್ಯವನ್ನು ಕಂಡುಹಿಡಿಯಲು ತಜ್ಞರ ತಟಸ್ಥ ಆಯೋಗದಿಂದ ವಿಶ್ವಾಸಾರ್ಹ, ಸ್ವತಂತ್ರ ಮತ್ತು ಪಾರದರ್ಶಕ ತನಿಖೆಗೆ ಸಹೃದಯದಿಂದ ಕರೆ ನೀಡಿದೆ' ಎಂದು ತರಾರ್ ಪ್ರತಿಪಾದಿಸಿದ್ದಾರೆ.







