ನೂರ್ ಖಾನ್ ವಾಯುನೆಲೆ ಮೇಲೆ ಭಾರತದ ಕ್ಷಿಪಣಿ ದಾಳಿ ದೃಢಪಡಿಸಿದ ಪಾಕ್ ಪ್ರಧಾನಿ

PC: screengrab/ x.com/Amansharma
ಇಸ್ಲಾಮಾಬಾದ್: ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಕ್ಷಿಪಣಿ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯು ನೆಲೆಯ ಮೇಲೆ ನಿಖರ ದಾಳಿ ನಡೆಸಿದ್ದನ್ನು ಇದೇ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ದೃಢಪಡಿಸಿದ್ದಾರೆ.
ಮೇ 9 ಮತ್ತು 10ರ ನಡುವಿನ ರಾತ್ರಿ 2.30ಕ್ಕೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಸ್ವತಃ ಕರೆ ಮಾಡಿ ಈ ಮಾಹಿತಿ ನೀಡಿದ್ದಾಗಿ ಷರೀಫ್ ಬಹಿರಂಗಪಡಿಸಿದ್ದಾರೆ. ಇದುವರೆಗೂ ಭಾರತದ ಮಿಲಿಟರಿ ಕಾರ್ಯಾಚರಣೆಯನ್ನು ಪಾಕಿಸ್ತಾನ ನಿರಾಕರಿಸುತ್ತಾ ಬಂದಿತ್ತು. ಪಾಕ್ ಪ್ರಧಾನಿ ಈ ಹೇಳಿಕೆ ನೀಡಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಸ್ಲಾಮಾಬಾದ್ ಪಾಕಿಸ್ತಾನ ಸ್ಮಾರಕದಲ್ಲಿ ನಡೆದ ವಿಶೇಷ "ಯೂಮ್-ಇ-ತಷ್ಕರ್' ಸಮಾರಂಭದಲ್ಲಿ ಷರೀಫ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, "ಮೇ 9-10ರ ಮಧ್ಯರಾತ್ರಿ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರು ಕರೆ ಮಾಡಿ, ಹಿಂದೂಸ್ತಾನಿ ಸಿಡಿತಲೆ ಕ್ಷಿಪಣಿ ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರದೇಶಗಳಿಗೆ ಅಪ್ಪಳಿಸಿದೆ ಎಂದು ಮಾಹಿತಿ ನಿಡಿದರು. ಆದರೆ ಜನರಲ್ ಅವರ ಧ್ವನಿಯಲ್ಲಿ ವಿಶ್ವಾಸ, ಆತ್ಮವಿಶ್ವಾಸ ಮತ್ತು ರಾಷ್ಟ್ರಪ್ರೇಮ ಇತ್ತು ಎನ್ನುವುದನ್ನು ನಾನು ದೇವರ ಮೇಲೆ ಪ್ರಮಾಣ ಮಾಡಿ ಹೇಳಬಲ್ಲೆ" ಎಂದಿದ್ದಾರೆ.
"ನಮ್ಮ ವಾಯುಪಡೆ ನಮ್ಮ ದೇಶವನ್ನು ರಕ್ಷಿಸಿಕೊಳ್ಳಲು ದೇಶಿ ತಂತ್ರಜ್ಞಾನವನ್ನು ಬಳಸಿದೆ; ಆದರೆ ಅವರು ಅತ್ಯಾಧುನಿಕ ಸಾಧನ ಸಲಕರಣೆಗಳು ಮತ್ತು ತಂತ್ರಜ್ಞಾನವನ್ನು ಚೀನಿ ಜೆಟ್ ಗಳ ಮೇಲೆ ಬಳಸಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.







