ನಾವು ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ಭಾರತವನ್ನು ಹೊಡೆದಿದ್ದೇವೆ: ಪಾಕ್ ರಾಜಕಾರಣಿಯ ಹೇಳಿಕೆ ವೈರಲ್

Image Source : X
ಇಸ್ಲಾಮಾಬಾದ್, ನ.19: ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂಬ ಆರೋಪಗಳ ಮಧ್ಯೆ, ಪಾಕಿಸ್ತಾನದ ರಾಜಕಾರಣಿ ಚೌಧರಿ ಅನ್ವರುಲ್ ಹಕ್ `ಭಯೋತ್ಪಾದಕ ಗುಂಪು ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ' ಭಾರತವನ್ನು ಹೊಡೆದಿದೆ' ಎಂದು ಹೇಳಿಕೆ ನೀಡಿದ್ದು ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
`ನೀವು ಬಲೂಚಿಸ್ತಾನದಲ್ಲಿ ರಕ್ತ ಹರಿಸುತ್ತಿದ್ದರೆ ನಾವು ಭಾರತವನ್ನು ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ಹೊಡೆಯುತ್ತೇವೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಅಲ್ಲಾಹನ ದಯೆಯಿಂದ ನಾವು ಅದನ್ನು ಮಾಡಿದ್ದೇವೆ ಮತ್ತು ಅವರಿಗೆ ಇನ್ನೂ ಮೃತದೇಹಗಳನ್ನು ಎಣಿಸಲು ಆಗುತ್ತಿಲ್ಲ. ಕೆಲ ದಿನಗಳ ಬಳಿಕ ಶಸ್ತ್ರಸಜ್ಜಿತ ವ್ಯಕ್ತಿಗಳು ದಿಲ್ಲಿಯನ್ನು ಪ್ರವೇಶಿಸಿ ದಾಳಿ ಮಾಡಿದ್ದಾರೆ ಮತ್ತು ಬಹುಷಃ ಅವರಿಗೆ ಇಲ್ಲಿಯವರೆಗೆ ಎಲ್ಲಾ ಮೃತದೇಹಗಳನ್ನು ಎಣಿಕೆ ಮಾಡಲು ಸಾಧ್ಯವಾಗಿಲ್ಲ ' ಎಂದು ಹಕ್ ಹೇಳಿದ್ದಾರೆ.
ಎಪ್ರಿಲ್ ನಲ್ಲಿ ಜಮ್ಮು- ಕಾಶ್ಮೀರದ ಪಹಲ್ಗಾಮ್ ನಲ್ಲಿ ಮತ್ತು ನವೆಂಬರ್ 10ರಂದು ದಿಲ್ಲಿಯ ಕೆಂಪು ಕೋಟೆಯ ಬಳಿ ನಡೆದ ದಾಳಿಯನ್ನು ಉಲ್ಲೇಖಿಸಿ ಹಕ್ ಹೇಳಿಕೆ ನೀಡಿರುವುದಾಗಿ ಮಾಧ್ಯಮಗಳು ವಿಶ್ಲೇಷಿಸಿವೆ.





