ಪಾಕ್: ಪ್ರಧಾನಿ ಅಭ್ಯರ್ಥಿಯಾಗಿ ಅಯೂಬ್ ಹೆಸರು ಸೂಚಿಸಿದ ಪಿಟಿಐ

Photo : AFP
ಇಸ್ಲಮಾಬಾದ್ : ಇಮ್ರಾನ್ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಪ್ರಧಾನ ಕಾರ್ಯದರ್ಶಿ ಒಮರ್ ಅಯೂಬ್ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ನಾಮ ನಿರ್ದೇಶನಗೊಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಫೆಬ್ರವರಿ 8ರಂದು ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಪಿಟಿಐ ಪಕ್ಷದ ಬೆಂಬಲದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು 101 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಮಾನ್ಯತೆ ಪಡೆದ ಪಕ್ಷ ಮಾತ್ರ ಸರಕಾರ ರಚಿಸಲು ಅವಕಾಶ ಇರುವುದರಿಂದ ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಂಡರೆ ಮಾತ್ರ ಸರಕಾರ ರಚಿಸಬಹುದಾಗಿದೆ. ಈ ಮಧ್ಯೆ, ನವಾಝ್ ಷರೀಫ್ ಅವರ ಪಿಎಂಎಲ್-ಎನ್ ಮತ್ತು ಬಿಲಾವಲ್ ಭುಟ್ಟೋ ಅವರ ಪಿಪಿಪಿ ಪಕ್ಷಗಳು ಮೈತ್ರಿ ಸರಕಾರ ರಚಿಸುವ ಪ್ರಯತ್ನ ಆರಂಭಿಸಿವೆ.
ಪಾಕಿಸ್ತಾನದ ಎರಡನೇ ಅಧ್ಯಕ್ಷರಾಗಿದ್ದ ಜನರಲ್ ಮುಹಮ್ಮದ್ ಅಯೂಬ್ ಖಾನ್ ಅವರ ಮೊಮ್ಮಗ ಮತ್ತು ಮಾಜಿ ಸಚಿವ ಗೋಹರ್ ಅಯೂಬ್ ಖಾನ್ ಅವರ ಪುತ್ರನಾಗಿರುವ ಒಮರ್ ಅಯೂಬ್, ಇಮ್ರಾನ್ಖಾನ್ ಅವರ ಸರಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.





