ಪಾಕಿಸ್ತಾನ: ಮಳೆ, ಪ್ರವಾಹಕ್ಕೆ ಮತ್ತೆ 10 ಬಲಿ; ಮೃತರ ಸಂಖ್ಯೆ 203ಕ್ಕೆ ಏರಿಕೆ

Photo Credit: Reuters
ಇಸ್ಲಾಮಾಬಾದ್, ಜು.20: ಪಾಕಿಸ್ತಾನದಲ್ಲಿ ನಿರಂತರ ಸುರಿಯುತ್ತಿರುವ ಮುಂಗಾರು ಮಳೆ ಹಾಗೂ ಪ್ರವಾಹದಿಂದ ಮತ್ತೆ 10 ಮಂದಿ ಸಾವನ್ನಪ್ಪಿದ್ದು 18 ಮಂದಿ ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಮಂಡಳಿಯ ಅಧಿಕಾರಿಗಳು ರವಿವಾರ ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ದೇಶದಲ್ಲಿ ಜೂನ್ 26ರಿಂದ ಪ್ರಾರಂಭಗೊಂಡಿರುವ ಮುಂಗಾರು ಮಳೆ ಹಾಗೂ ಭೀಕರ ಪ್ರವಾಹಕ್ಕೆ ಸಂಬಂಧಿಸಿದ ಒಟ್ಟು ಸಾವಿನ ಸಂಖ್ಯೆ 203ಕ್ಕೇರಿದ್ದು (100ಕ್ಕೂ ಹೆಚ್ಚು ಮಕ್ಕಳು) ಗಾಯಗೊಂಡವರ ಸಂಖ್ಯೆ 562ಕ್ಕೇರಿದೆ. ಶನಿವಾರ ರಾತ್ರಿಯಿಂದ ಪಂಜಾಬ್ ಮತ್ತು ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳು ನೆರೆ ನೀರಲ್ಲಿ ಮುಳುಗಿವೆ. ಪಂಜಾಬ್ ಪ್ರಾಂತದಲ್ಲಿ 9 ಮಂದಿ ಸಾವನ್ನಪ್ಪಿದ್ದು 17 ಮಂದಿ ಗಾಯಗೊಂಡಿದ್ದರೆ, ಖೈಬರ್ ಪಖ್ತೂಂಕ್ವಾದಲ್ಲಿ ಒಬ್ಬ ಸಾವನ್ನಪ್ಪಿದ್ದು ಮತ್ತೊಬ್ಬ ಗಾಯಗೊಂಡಿದ್ದಾನೆ.
ರಾವಲ್ಪಿಂಡಿಯಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ಮನೆಗಳು, ರಸ್ತೆಗಳು ಜಲಾವೃತಗೊಂಡಿದ್ದು ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸಲಾಗಿದೆ. ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿರುವುದಾಗಿ ಜಿಯೊ ಟಿವಿ ವರದಿ ಮಾಡಿದೆ.





