ಪಾಕಿಸ್ತಾನ: ಕ್ರಿಶ್ಚಿಯನ್ನರ ವಿವಾಹದ ಕನಿಷ್ಟ ವಯೋಮಿತಿ 18 ವರ್ಷಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
ಇಸ್ಲಮಾಬಾದ್ : ಕ್ರಿಶ್ಚಿಯನ್ ಮಹಿಳೆ ಮತ್ತು ಪುರುಷರ ವಿವಾಹದ ಕನಿಷ್ಟ ಕಾನೂನುಬದ್ದ ವಯೋಮಿತಿಯನ್ನು 18 ವರ್ಷಕ್ಕೆ ಹೆಚ್ಚಿಸುವ ಕಾಯ್ದೆಗೆ ಅಧ್ಯಕ್ಷ ಆಸಿಫ್ ಆಲಿ ಝರ್ದಾರಿ ಸಹಿ ಹಾಕಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.
ಕ್ರಿಶ್ಚಿಯನ್ ವಿವಾಹ ಕಾಯಿದೆ 1872ರ ಸೆಕ್ಷನ್ 60ಕ್ಕೆ ತಿದ್ದುಪಡಿ ಮಾಡಿರುವ ಕ್ರಿಶ್ಚಿಯನ್ ವಿವಾಹ(ತಿದ್ದುಪಡಿ) ಕಾಯ್ದೆ 2024ಕ್ಕೆ ಅಧ್ಯಕ್ಷ ಝರ್ದಾರಿ ಅನುಮೋದನೆ ನೀಡಿದ್ದಾರೆ. ಹೊಸ ಕಾನೂನಿನಡಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ಪುರುಷರು ಮತ್ತು ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18ಕ್ಕೆ ನಿಗದಿಪಡಿಸಲಾಗಿದೆ. ಈ ಹಿಂದೆ, ಮದುವೆಯಾಗಲು ಉದ್ದೇಶಿಸುವ ಕ್ರಿಶ್ಚಿಯನ್ ಪುರುಷರ ಕನಿಷ್ಟ ವಯಸ್ಸು 16, ಮಹಿಳೆಯರ ಕನಿಷ್ಟ ವಯಸ್ಸು 13 ಎಂದು ನಿಗದಿಯಾಗಿತ್ತು. ಕನಿಷ್ಟ ಕಾನೂನುಬದ್ಧ ಮಿತಿಯನ್ನು ಹೆಚ್ಚಿಸುವ ಮಸೂದೆಯನ್ನು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸರ್ವಾನುಮತದಿಂದ ಅಂಗೀಕರಿಸಿತ್ತು. ಮಸೂದೆಗೆ ಸಹಿ ಹಾಕಿದ ಬಳಿಕ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಝರ್ದಾರಿ `ಎಲ್ಲಾ ಅಲ್ಪಸಂಖ್ಯಾತರೂ ಸಮಾನ ಹಕ್ಕುಗಳನ್ನು ಹೊಂದಿರುವ ಪಾಕಿಸ್ತಾನದ ಸಮಾನ ನಾಗರಿಕರು' ಎಂದು ಹೇಳಿದರು.
ಸರಕಾರದ ಕ್ರಮವನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವಿವಿಧ ಕ್ರಿಶ್ಚಿಯನ್ ಸಂಘಟನೆಗಳು ಸ್ವಾಗತಿಸಿವೆ.