ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶ; ವರದಿ

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Photo: PTI)
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಅಲ್ಲಿಯ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ತನ್ಮೂಲಕ ಖಾನ್ ಆರೋಗ್ಯದ ಕುರಿತು ಆತಂಕ ವ್ಯಕ್ತಪಡಿಸಿದ್ದ ಅವರ ಪಕ್ಷ ‘ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ)’ ಮತ್ತು ಕುಟುಂಬದ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದೆ ಎಂದು ಪಿಟಿಐ ಅನ್ನು ಉಲ್ಲೇಖಿಸಿ reuters.com ವರದಿ ಮಾಡಿದೆ.
ಕ್ರಿಕೆಟಿಗ-ಪರಿವರ್ತಿತ-ರಾಜಕಾರಣಿ ಇಮ್ರಾನ್ ಖಾನ್ (73) 2022ರಲ್ಲಿ ಪದಚ್ಯುತಗೊಂಡಿದ್ದು, ಸರಣಿ ಪ್ರಕರಣಗಳಿಗೆ ಶಿಕ್ಷೆಗೆ ಗುರಿಯಾಗಿ ಆಗಸ್ಟ್ 2023ರಿಂದ ಜೈಲಿನಲ್ಲಿದ್ದಾರೆ. ತನ್ನ ವಿರುದ್ಧದ ಪ್ರಕರಣಗಳು ರಾಜಕೀಯ ಪ್ರೇರಿತವಾಗಿವೆ ಎಂದು ಖಾನ್ ಪ್ರತಿಪಾದಿಸಿದ್ದಾರೆ.
ಕಳೆದ ವರ್ಷ ಖಾನ್ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಅವರ ಪುತ್ರರು ಕಳವಳ ವ್ಯಕ್ತಪಡಿಸಿದ್ದರು. ಜೈಲಿನಲ್ಲಿ ಖಾನ್ ಅವರ ಬಲಗಣ್ಣಿನ ದೃಷ್ಟಿ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಅವರ ಪರ ವಕೀಲರು ಹೇಳಿದ್ದರು.
ಇದು ಅತ್ಯಂತ ಸ್ವಾಗತಾರ್ಹ ಆದೇಶ. ಅವರ ಕಣ್ಣು ಮತ್ತು ಒಟ್ಟಾರೆ ಆರೋಗ್ಯವು ಇಷ್ಟೊಂದು ಹದಗೆಡುವ ಮೊದಲೇ ಈ ಆದೇಶ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಪಿಟಿಐ ವಕ್ತಾರ ಜುಲ್ಫಿಕರ್ ಬುಖಾರಿ ಹೇಳಿದರು. ಎಲ್ಲ ವೈದ್ಯರು ತೃಪ್ತಿ ವ್ಯಕ್ತಪಡಿಸುವವರೆಗೆ ಅವರು ಆಸ್ಪತ್ರೆಯಲ್ಲೇ ಇರಬೇಕು ಎಂದು ಅವರು ಪ್ರತಿಪಾದಿಸಿದರು.
ಖಾನ್ ಅವರನ್ನು 48 ಗಂಟೆಗಳ ಒಳಗೆ ಶಿಫಾ ಇಂಟರ್ನ್ಯಾಷನಲ್ ಆಸ್ಪತ್ರೆಗೆ ಸ್ಥಳಾಂತರಿಸಲು ಮತ್ತು ಸೆಪ್ಟೆಂಬರ್ 16ರವರೆಗೆ ಅಲ್ಲೇ ಇರಿಸಲು ನ್ಯಾಯಾಲಯವು ನಿರ್ದೇಶಿಸಿದೆ ಎಂದು ಅವರ ವಕ್ತಾರ ನಯೀಮ್ ಹೈದರ್ ಪಂಜುಥಾ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರ ಕಳೆದುಕೊಂಡ ಬಳಿಕ ಖಾನ್ ಸರಕಾರಿ ಉಡುಗೊರೆಗಳು ಮತ್ತು ಅಕ್ರಮ ವಿವಾಹ ಕುರಿತು ಹಲವಾರು ಪ್ರಕರಣಗಳನ್ನು ಎದುರಿಸಿದ್ದಾರೆ. ಕೆಲವು ಶಿಕ್ಷೆಗಳನ್ನು ಅಮಾನತುಗೊಳಿಸಲಾಗಿದೆ ಅಥವಾ ರದ್ದುಗೊಳಿಸಲಾಗಿದೆ ಮತ್ತು ಮೇಲ್ಮನವಿಗಳು ಬಾಕಿ ಉಳಿದಿವೆ. ತಾನು ಯಾವುದೇ ತಪ್ಪು ಮಾಡಿರುವುದನ್ನು ಖಾನ್ ನಿರಾಕರಿಸಿದ್ದಾರೆ.
ಫೆಬ್ರವರಿಯಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತದ ಕ್ರಿಕೆಟ್ ದಿಗ್ಗಜರು ಜೈಲಿನಲ್ಲಿ ಖಾನ್ ಅವರ ಸ್ಥಿತಿಗತಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಅವರಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿದ್ದರು.
ಪಿಟಿಐ 2018ರಲ್ಲಿ ಅಧಿಕಾರಕ್ಕೆ ಬಂದಿತ್ತು ಮತ್ತು ಪ್ರಮುಖ ಪ್ರಾಂತ್ಯಗಳಲ್ಲಿ ಈಗಲೂ ಭಾರೀ ಬೆಂಬಲವನ್ನು ಹೊಂದಿದೆ. ಆದರೆ 2024ರ ಚುನಾವಣೆಗೆ ಮುನ್ನ ಅದರ ಚುನಾವಣಾ ಚಿಹ್ನೆಯನ್ನು ರದ್ದುಗೊಳಿಸಲಾಗಿತ್ತು, ಇದರಿಂದಾಗಿ ಅದರ ಅಭ್ಯರ್ಥಿಗಳು ಸ್ವತಂತ್ರರಾಗಿ ಸ್ಪರ್ಧಿಸಬೇಕಾಗಿತ್ತು.






