ಪಾಕಿಸ್ತಾನ: ಉಧಾಂಪುರ ದಾಳಿಯ ಸಂಚುಗಾರ ಅದ್ನಾನ್ ಹತ್ಯೆ
ಲಾಹೋರ್: ಜಮ್ಮು ಮತ್ತು ಕಾಶ್ಮೀರದ ಉಧಾಂಪುರದಲ್ಲಿ 2015ರಲ್ಲಿ ಗಡಿಭದ್ರತಾ ಪಡೆಯ ವಾಹನಗಳ ಮೇಲೆ ನಡೆದಿದ್ದ ದಾಳಿಯ ಪ್ರಮುಖ ಪಿತೂರಿಗಾರ, ಮುಂಬೈ ದಾಳಿಯ ಸೂತ್ರಧಾರ ಹಫೀಝ್ ಸಯೀದ್‍ನ ನಿಕಟ ಸಹಾಯಕ ಹಂಝ್ಲಾ ಅದ್ನಾನ್ ಕರಾಚಿಯಲ್ಲಿ ಗುರುತಿಸಲಾಗದ ಬಂದೂಕುಧಾರಿಗಳ ಗುಂಡಿನ ದಾಳಿಯಲ್ಲಿ ಹತನಾಗಿರುವುದಾಗಿ ವರದಿಯಾಗಿದೆ.
ಡಿಸೆಂಬರ್ 3ರಂದು ಬೆಳಿಗ್ಗೆ ತನ್ನ ಮನೆಯೆದುರು ನಿಂತಿದ್ದ ಅದ್ನಾನ್ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು ಈತನ ದೇಹದಲ್ಲಿ 4 ಬುಲೆಟ್‍ಗಳು ಪತ್ತೆಯಾಗಿವೆ. ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಅದ್ನಾನ್‍ನನ್ನು ಪಾಕ್ ಸೇನೆ ರಹಸ್ಯವಾಗಿ ಕರಾಚಿಯ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಡಿಸೆಂಬರ್ 5(ಮಂಗಳವಾರ) ಮೃತಪಟ್ಟಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ `ಇಂಡಿಯಾ ಟುಡೆ' ಟಿವಿ ವರದಿ ಮಾಡಿದೆ.
ಅದ್ನಾನ್ ತನ್ನ ಕಾರ್ಯಾಚರಣೆಯ ನೆಲೆಯನ್ನು ಇತ್ತೀಚೆಗಷ್ಟೇ ರಾವಲ್ಪಿಂಡಿಯಿಂದ ಕರಾಚಿಗೆ ಸ್ಥಳಾಂತರಿಸಿದ್ದ ಎಂದು ವರದಿ ಹೇಳಿದೆ. ಈ ಮಧ್ಯೆ, ಬಿಂಧ್ರನ್‍ವಾಲೆಯ ಸೋದರಳಿಯ, ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಲಕ್ಬೀರ್ ಸಿಂಗ್ ರೋಡ್ ಡಿಸೆಂಬರ್ 2ರಂದು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.





