ಜರನ್ವಾಲ ಘಟನೆಗಳನ್ನು ಖಂಡಿಸಿದ ಪಾಕಿಸ್ತಾನ ಉಲೆಮಾ ಕೌನ್ಸಿಲ್

Photo: PTI
ಇಸ್ಲಾಮಾಬಾದ್: ಪಾಕಿಸ್ತಾನ್ ಉಲೆಮಾ ಕೌನ್ಸಿಲ್ ಅಧ್ಯಕ್ಷ ಹಾಫಿಝ್ ಮುಹಮ್ಮದ್ ತಾಹಿರ್ ಅಶ್ರಫಿ ಅವರು ಫೈಸಲಾಬಾದ್ನ ಜರನ್ವಾಲ ಎಂಬಲ್ಲಿ ಪವಿತ್ರ ಕುರ್ ಆನ್ ಗ್ರಂಥಕ್ಕೆ ದುಷ್ಕರ್ಮಿಗಳು ಉಂಟು ಮಾಡಿದ ಹಾನಿ ಹಾಗು ಕ್ರೈಸ್ತ ಧಾರ್ಮಿಕ ಸ್ಥಳಗಳು ಮತ್ತು ಮನೆಗಳ ಮೇಲಿನ ಹಿಂಸಾತ್ಮಕ ದಾಳಿಗಳನ್ನು ಖಂಡಿಸಿದ್ದಾರೆ.
ಜರನ್ವಾಲ ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆಗೆ ಶ್ರಮಿಸಲು ಪಾಕಿಸ್ತಾನ ಉಲೆಮಾ ಕೌನ್ಸಿಲ್ ಮತ್ತು ಇಂಟರ್ನ್ಯಾಷನಲ್ ಇಂಟರ್ಫೈಥ್ ಹಾರ್ಮನಿ ಕೌನ್ಸಿಲ್ ಇದರ ಪ್ರಮುಖರನ್ನೊಳಗೊಂಡ ಜಂಟಿ ನಿಯೋಗದ ರಚನೆಯನ್ನೂ ಅವರು ಘೋಷಿಸಿದ್ದಾರೆ.
ಅಶ್ರಫಿ ಅವರು ಇಂಟರ್ನ್ಯಾಷನಲ್ ಇಂಟರ್ಫೈಥ್ ಹಾರ್ಮನಿ ಕೌನ್ಸಿಲ್ ಅಧ್ಯಕ್ಷರೂ ಆಗಿದ್ದಾರೆ.
ಇಸ್ಲಾಂ ಧರ್ಮವು ಶಾಂತಿ, ಏಕತೆ ಮತ್ತು ಸಮಗ್ರತೆಗೆ ಒತ್ತು ನೀಡುತ್ತದೆ, ಮುಸ್ಲಿಂ ಬಹುಸಂಖ್ಯಾತರು ದೇಶದಲ್ಲಿರುವ ಮುಸ್ಲಿಮೇತರ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಯೋಗಕ್ಷೇಮಕ್ಕಾಗಿ ಶ್ರಮಿಸಬೇಕು ಎಂದು ಅವರು ಹೇಳಿದರು.
ಸಕಾರಾತ್ಮಕ ಸಾಮಾಜಿಕ ಪರಿವರ್ತನೆಗಾಗಿ ಧಾರ್ಮಿಕ ನಾಯಕರು ಹಾಗೂ ಆಡಳಿತ ಶ್ರಮಿಸಬೇಕು ಎಂದು ಅವರು ಆಗ್ರಹಿಸಿದರಲ್ಲದೆ ಜರನ್ವಾಲ ಘಟನೆಯ ನಿಷ್ಪಕ್ಷಪಾತ ತನಿಖೆಗೆ ಉನ್ನತ ಮಟ್ಟದ ಸಮಿತಿಯ ರಚನೆಯಾಗಬೇಕೆಂದೂ ಆಗ್ರಹಿಸಿದರು.
ಹಿಂಸಾತ್ಮಕ ಘಟನೆಯಲ್ಲಿ ಕ್ರೈಸ್ತ ಸಮುದಾಯ ಅನುಭವಿಸಿದ ನಷ್ಟವನ್ನು ಅಂದಾಜಿಸಿ ತ್ವರಿತವಾಗಿ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಕುರ್ ಆನ್ ಪವಿತ್ರ ಗ್ರಂಥಕ್ಕೆ ಹಾನಿಯೆಸಗಿದವರಿಗೆ ಶಿಕ್ಷೆಯಾಗಬೇಕು ಎಂದು ತಾಹಿರ್ ಅಶ್ರಫಿ ಆಗ್ರಹಿಸಿದ್ದಾರೆ.