F16 ವಿಮಾನಗಳ ಆಧುನೀಕರಣ: Pakistan - US ಒಪ್ಪಂದ

Photo Credit : AP \ PTI
ವಾಷಿಂಗ್ಟನ್, ಡಿ.11: ಪಾಕಿಸ್ತಾನದ ಬಳಿಯಿರುವ ಎಫ್-16 ಯುದ್ಧವಿಮಾನಗಳನ್ನು ಅತ್ಯಾಧುನಿಕಗೊಳಿಸುವ ನಿಟ್ಟಿನಲ್ಲಿ 686 ದಶಲಕ್ಷ ಡಾಲರ್ ಮೊತ್ತದ ತಂತ್ರಜ್ಞಾನ ನೆರವು ಒದಗಿಸುವ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಅಮೆರಿಕ ಅನುಮೋದನೆ ನೀಡಿರುವುದಾಗಿ ವರದಿಯಾಗಿದೆ.
ಈ ಪ್ಯಾಕೇಜ್ನಲ್ಲಿ ಲಿಂಕ್-16 ವ್ಯವಸ್ಥೆಗಳು, ಕ್ರಿಪ್ಟೋಗ್ರಾಫಿಕ್ ಉಪಕರಣಗಳು, ವಿಮಾನಯಾನ ಇಲೆಕ್ಟ್ರಾನಿಕ್ಸ್ ಮತ್ತು ವಿದ್ಯುತ್ ವ್ಯವಸ್ಥೆಗಳ ನವೀಕರಣ, ತರಬೇತಿ ಮತ್ತು ಸಮಗ್ರ ಲಾಜಿಸ್ಟಿಕ್ ಬೆಂಬಲವನ್ನು ಒಳಗೊಂಡಿದೆ ಎಂದು ಅಮೆರಿಕದ ಸಂಸತ್ತಿಗೆ ರಕ್ಷಣಾ ಭದ್ರತೆ ಸಹಕಾರ ಏಜೆನ್ಸಿ(ಡಿಎಸ್ಸಿಎ) ಬರೆದಿರುವ ಪತ್ರವನ್ನು ಉಲ್ಲೇಖಿಸಿ `ಡಾನ್' ವರದಿ ಮಾಡಿದೆ.
ಒಪ್ಪಂದವು 30 ದಿನಗಳ ಪರಿಶೀಲನಾ ಅವಧಿಯನ್ನು ಒಳಗೊಂಡಿದ್ದು ಅಮೆರಿಕಾ ಸಂಸತ್ ಸದಸ್ಯರ ಸೂಕ್ಷ್ಮ ಪರಿಶೀಲನೆಗೆ ಒಳಪಡುವ ನಿರೀಕ್ಷೆಯಿದೆ. ಈ ಬೆಳವಣಿಗೆಗಳ ಮೇಲೆ ಭಾರತ ನಿಕಟ ನಿಗಾ ಇರಿಸಿದೆ.
ಲಿಂಕ್-16 ಸುಧಾರಿತ ಆದೇಶ, ನಿಯಂತ್ರಣ, ಸಂವಹನ ಮತ್ತು ಗುಪ್ತಚರ ವ್ಯವಸ್ಥೆಯಾಗಿದೆ. ಇದು ಸುರಕ್ಷಿತ, ನೈಜ ಸಮಯದ ಸಂವಹನ ನೆಟ್ವರ್ಕ್ ಆಗಿದ್ದು ಅದು ಮಿತ್ರ ಪಡೆಗಳ ನಡುವೆ ಯುದ್ಧತಂತ್ರದ ಡೇಟಾವನ್ನು ಹಂಚಿಕೊಳ್ಳುತ್ತದೆ. ಶತ್ರುಗಳು ಗಾಳಿ ಮತ್ತು ನೆಲದ ವ್ಯವಸ್ಥೆಗಳಿಂದ ಇಲೆಕ್ಟ್ರಾನಿಕ್ ಜ್ಯಾಮಿಂಗ್ ನಡೆಸುವುದನ್ನು ಈ ವ್ಯವಸ್ಥೆ ತಡೆಯುತ್ತದೆ.







