ಹೌದಿ ಬಂಡುಕೋರರನ್ನು ನಿಯಂತ್ರಿಸಿ: ಇರಾನ್ಗೆ ಪಾಕಿಸ್ತಾನ ಎಚ್ಚರಿಕೆ

Photo Credit : NDTV
ಇಸ್ಲಮಾಬಾದ್: ಸೌದಿ ಅರೇಬಿಯಾ ಮೇಲಿನ ದಾಳಿಗಳು ತೀವ್ರಗೊಂಡ ಹಿನ್ನೆಲೆಯಲ್ಲಿ, ಯೆಮನ್ನ ಹೌದಿಬಂಡುಕೋರರನ್ನು ನಿಯಂತ್ರಿಸುವಂತೆ ಪಾಕಿಸ್ತಾನವು ಇರಾನ್ಗೆ ಎಚ್ಚರಿಕೆ ನೀಡಿದೆ. ಈ ಸಂಘರ್ಷವು ವ್ಯಾಪಕ ಪ್ರಾದೇಶಿಕ ಬಿಕ್ಕಟ್ಟಾಗಿ ಬದಲಾಗುವುದನ್ನು ತಡೆಯಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ರಾಯಿಟರ್ಸ್' ವರದಿ ಮಾಡಿದೆ.
ಸೌದಿ ಅರೇಬಿಯಾ ಮೇಲಿನ ಹೌದಿ ದಾಳಿಗಳನ್ನು ತಡೆಯಲು ತನ್ನ ಪ್ರಭಾವವನ್ನು ಬಳಸುವಂತೆ ಪಾಕಿಸ್ತಾನ ಇರಾನ್ ಅನ್ನು ಒತ್ತಾಯಿಸಿದ್ದು ಹೌದಿಗಳನ್ನು ನಿಯಂತ್ರಿಸದಿದ್ದರೆ ಈ ಸಂಘರ್ಷವು ವ್ಯಾಪಕ ಪ್ರಾದೇಶಿಕ ಭದ್ರತಾ ಬಿಕ್ಕಟ್ಟಾಗಿ ಬದಲಾಗುವ ಅಪಾಯವಿದೆ ಎಂಬ ಸಂದೇಶ ರವಾನಿಸಿದೆ ಎಂದು ಇರಾನ್ನ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಆದರೆ ಹೌದಿಗಳನ್ನು ಇರಾನ್ ನಿಯಂತ್ರಿಸುವುದಿಲ್ಲ' ಎಂಬುದು ನಮ್ಮ ಉತ್ತರವಾಗಿತ್ತು ಎಂದಿದ್ದಾರೆ.
ಸೌದಿ ಅರೇಬಿಯಾ ಮತ್ತು ತುರ್ಕಿಯೆಯೊಂದಿಗಿನ ರಕ್ಷಣಾ ಒಪ್ಪಂದದ ಕಾರಣ ಪಾಕಿಸ್ತಾನದ ಈ ಮಧ್ಯಸ್ಥಿಕೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಸೌದಿ ಅರೇಬಿಯಾಕ್ಕೆ ಹರಡುವ ಯಾವುದೇ ಆಕ್ರಮಣವು ಈ ಮೂರು ದೇಶಗಳ ಭದ್ರತಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಬಹುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿರುವುದಾಗಿ ವರದಿಯಾಗಿದೆ.




