ಪಾಕಿಸ್ತಾನವು ಇಸ್ರೇಲ್ ಮೇಲೆ ಪರಮಾಣು ಕ್ಷಿಪಣಿಯಿಂದ ದಾಳಿ ಮಾಡಲಿದೆ: ಇರಾನಿನ ಉನ್ನತ ಅಧಿಕಾರಿ ಹೇಳಿಕೆ

IRGC ಹಿರಿಯ ಜನರಲ್ ಮೊಹ್ಸೆನ್ ರೆಝಾಯಿ (Photo credit: Tasnim News Agency)
ಟೆಹ್ರಾನ್: ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದರೆ, ಪಾಕಿಸ್ತಾನವು ಪರಮಾಣು ದಾಳಿಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಪಾಕಿಸ್ತಾನ ಇರಾನ್ ಗೆ ಭರವಸೆ ನೀಡಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಿರಿಯ ಜನರಲ್ ಮತ್ತು ಇರಾನಿನ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಮೊಹ್ಸೆನ್ ರೆಝಾಯಿ ಇರಾನ್ ರಾಜ್ಯ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.
"ಇಸ್ರೇಲ್ ಪರಮಾಣು ಕ್ಷಿಪಣಿಗಳನ್ನು ಬಳಸಿದರೆ, ನಾವು ಅದರ ಮೇಲೆ ಪರಮಾಣು ದಾಳಿ ಮಾಡುತ್ತೇವೆ ಎಂದು ಪಾಕಿಸ್ತಾನ ನಮಗೆ ಹೇಳಿದೆ" ಎಂದು ರೆಝಾಯಿ ಇರಾನ್ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಪಾಕಿಸ್ತಾನದ ಶಹೀನ್-3 ಕ್ಷಿಪಣಿಯು 2,700 ಕಿಲೋಮೀಟರ್ಗಳಷ್ಟು ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯವಿದೆ. ಹಾಗಾಗಿ ಪಾಕಿಸ್ತಾನವು ಇಸ್ರೇಲ್ ನ ಯಾವುದೇ ಪ್ರದೇಶವನ್ನು ಗುರಿಯಾಗಿಸುವ ಸಾಧ್ಯತೆ ಇದೆ. ಇದರ ನಿಯೋಜನೆಯ ಬಗ್ಗೆ ಪಾಕಿಸ್ತಾನಿ ಸೇನೆಯು ಯಾವುದೇ ಹೇಳಿಕೆ ನೀಡಿಲ್ಲ.
ಇಸ್ರೇಲ್ ದಾಳಿಯ ನಡುವೆ ಪಾಕಿಸ್ತಾನವು ಇರಾನ್ಗೆ ಬಲವಾದ ಮೌಖಿಕ ಬೆಂಬಲವನ್ನು ನೀಡಿದ್ದರೂ, ಇಸ್ರೇಲ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಯಾವುದೇ ಕುರಿತು ಪಾಕಿಸ್ತಾನದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಇರಾನ್ ಬಳಿ ಇನ್ನಷ್ಟು ಸಾಮರ್ಥ್ಯಗಳು, ತಂತ್ರಗಳು ಇವೆ. ಅದನ್ನು ಇನ್ನು ಬಹಿರಂಗಪಡಿಸಲಾಗಿಲ್ಲ. ಅಗತ್ಯ ಬಂದಾಗ ಇರಾನ್ ನ ಸಾಮರ್ಥ್ಯವೇನೆಂದು ಬಹಿರಂಗಪಡಿಸುತ್ತೇವೆ ಎಂದು ರೆಝಾಯಿ ಉಲ್ಲೇಖಿಸಿದ್ದಾರೆ.
ಇರಾನಿನ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ ಪಾಕಿಸ್ತಾನವು ಇರಾನ್ ಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.
ಜೂನ್ 14 ರಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಆಸಿಫ್ ಖ್ವಾಜಾ, ಇಸ್ರೇಲ್ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಒಂದಾಗಬೇಕೆಂದು ಕರೆ ನೀಡಿದ್ದರು. ಇಸ್ರೇಲ್ ನ ಆಕ್ರಮಣವು ಇರಾನ್ ಅನ್ನು ಮಾತ್ರವಲ್ಲದೆ ಯೆಮೆನ್ ಮತ್ತು ಫೆಲೆಸ್ತೀನ್ ಅನ್ನೂ ಗುರಿಯಾಗಿಸಿಕೊಂಡಿದೆ. ಮುಸ್ಲಿಂ ರಾಷ್ಟ್ರಗಳು ಒಂದಾಗಲು ವಿಫಲವಾದರೆ, ಎಲ್ಲರ ಮೇಲೂ ಮುಂದಿನ ದಿನಗಳಲ್ಲಿ ಈ ರೀತಿಯ ದಾಳಿಗಳು ನಡೆಯಲಿದೆ ಎಂದು ಅವರು ಎಚ್ಚರಿಸಿದರು.
ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವ ಮುಸ್ಲಿಂ ರಾಷ್ಟ್ರಗಳು ಅವುಗಳನ್ನು ತಕ್ಷಣವೇ ಅದರಿಂದ ದೂರ ಸರಿಯುವಂತೆ ಅವರು ಒತ್ತಾಯಿಸಿದರು. ಇಸ್ಲಾಮಿಕ್ ಸಹಕಾರ ಸಂಸ್ಥೆ (OIC) ಸಭೆ ಸೇರಿ ಜಂಟಿ ಕಾರ್ಯತಂತ್ರವನ್ನು ರೂಪಿಸುವಂತೆಯೂ ಕರೆ ನೀಡಿದರು.
ಇರಾನ್ನೊಂದಿಗಿನ ಪಾಕಿಸ್ತಾನದ ಆಳವಾದ ಸಂಬಂಧಗಳನ್ನು ಒತ್ತಿ ಹೇಳಿದ ಆಸಿಫ್ ಅವರು ಅದರ ಹಿತಾಸಕ್ತಿಗಳನ್ನು ರಕ್ಷಿಸಲು ಎಲ್ಲಾ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಟೆಹ್ರಾನ್ಗೆ ಬೆಂಬಲ ನೀಡುವುದಾಗಿ ಪ್ರತಿಜ್ಞೆ ಮಾಡಿದರು.
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇರಾನ್ನೊಂದಿಗಿನ ಪಾಕಿಸ್ತಾನದ ಒಗ್ಗಟ್ಟನ್ನು ಪುನರುಚ್ಚರಿಸಿದ್ದಾರೆ. ಇಸ್ರೇಲ್ ನ ದಾಳಿಗಳು ಇರಾನ್ ನ ಸಾರ್ವಭೌಮತ್ವದ ಉಲ್ಲಂಘನೆ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಬೆದರಿಕೆ ಎಂದು ಅವರು ಖಂಡಿಸಿದ್ದಾರೆ.
ಇಸ್ರೇಲ್ ನ ಆಕ್ರಮಣವನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳುವಂತೆ ಅವರು ಅಂತರರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ. ಈ ಪ್ರದೇಶದಲ್ಲಿ ಶಾಂತಿಯನ್ನು ಉತ್ತೇಜಿಸುವ ಪಾಕಿಸ್ತಾನದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.







