ಪಾಕಿಸ್ತಾನ ವಿವಿಯಲ್ಲಿ ಸಂಸ್ಕೃತ ಪಠ್ಯಕ್ರಮ!

Photo Credit ; indiatoday.in
ಲಾಹೋರ್, ಡಿ.13: ವಿಭಜನೆಯ ಬಳಿಕ ಮೊದಲ ಬಾರಿಗೆ ಪಾಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪಠ್ಯಕ್ರಮವನ್ನು ಆರಂಭಿಸಿರುವುದಾಗಿ ವರದಿಯಾಗಿದೆ.
ಲಾಹೋರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈಯನ್ಸಸ್(ಎಲ್ಯುಎಂಎಸ್) ಸಂಸ್ಕೃತದ ಪಠ್ಯಕ್ರಮವನ್ನು ಪರಿಚಯಿಸಿರುವುದಾಗಿ ವರದಿಯಾಗಿದೆ.
ಸಂಸ್ಕೃತ ಅಧ್ಯಯನದ ಕುರಿತು ಮತ್ತೆ ಗಮನ ಹರಿಸಲು ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಶಾಹಿದ್ ರಶೀದ್ ಅವರು ತೀವ್ರ ಪ್ರಯತ್ನ ನಡೆಸಿದ್ದರು.
` ಶಾಸ್ತ್ರೀಯ ಭಾಷೆಗಳು ಮನುಕುಲಕ್ಕೆ ಹೆಚ್ಚಿನ ಜ್ಞಾನವನ್ನು ತಲುಪಿಸುತ್ತವೆ. ಸಂಸ್ಕೃತದ ಬಗ್ಗೆ ಯಾಕೆ ಹೆಚ್ಚಿನ ಆಸಕ್ತಿ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ನಾನು `ಯಾಕೆ ಕಲಿಯಬಾರದು ಎಂದು ಮರುಪ್ರಶ್ನಿಸಿದ್ದೆ. ಇದು ಇಡೀ ಪ್ರದೇಶವನ್ನು ಕಟ್ಟಿಕೊಡುವ ಭಾಷೆಯಾಗಿದೆ. ಸಂಸ್ಕೃತ ವ್ಯಾಕರಣಕಾರ ಪಾಣಿನಿಯ ಗ್ರಾಮವು ಈ ವಲಯದಲ್ಲಿತ್ತು. ಸಿಂಧೂ ಕಣಿವೆ ನಾಗರಿಕತೆಯ ಅವಧಿಯಲ್ಲಿ ಇಲ್ಲಿ ಸಂಸ್ಕೃತದಲ್ಲಿ ಹೆಚ್ಚಿನ ಕೃತಿಗಳನ್ನು ರಚಿಸಲಾಗಿದೆ. ಸಂಸ್ಕೃತವ ಸಾಂಸ್ಕೃತಿಕ ಶಿಖರವಾಗಿದ್ದು ಇದು ನಮ್ಮದೂ ಕೂಡಾ. ಇದು ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿಲ್ಲ' ಎಂದು ರಶೀದ್ ಹೇಳಿರುವುದಾಗಿ `ದಿ ಟ್ರಿಬ್ಯೂನ್' ವರದಿ ಮಾಡಿದೆ.





