ಫೆಲೆಸ್ತೀನ್ ಗೆ ಬೆಂಬಲ ಸೂಚಿಸಿ ಚೆನ್ನೈ ಸಮಾವೇಶದಲ್ಲಿ ನೆರೆದ ಸಾವಿರಾರು ಮಂದಿ: ಗಾಝಾ ಪರವಾಗಿ ಮಾತನಾಡುವುದನ್ನು ಮುಂದುವರಿಸುತ್ತೇವೆ ಎಂದು ಘೋಷಣೆ

PC : X \ @thirumaofficial
ಚೆನ್ನೈ: ಗಾಝಾದಲ್ಲಿ ಇಸ್ರೇಲ್ ನಿಂದ ನಡೆಯುತ್ತಿರುವ ಜನಾಂಗೀಯ ಯುದ್ಧವನ್ನು ಪ್ರತಿಭಟಿಸಿ ಶುಕ್ರವಾರ ಪೆರಿಯಾರ್ ಹಿಂಬಾಲಕರ ಮಹಾ ಒಕ್ಕೂಟದ ನೇತೃತ್ವದಲ್ಲಿ ತಮಿಳುನಾಡಿನಾದ್ಯಂತ ಇರುವ ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಹಾಗೂ ಮುಸ್ಲಿಂ ಸಂಘಟನೆಗಳ ಸಾವಿರಾರು ಮಂದಿ ಕಾರ್ಯಕರ್ತರು ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶ ಹಾಗೂ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು.
ಈ ಸಮಾವೇಶದಲ್ಲಿ ಪ್ರಖ್ಯಾತ ವ್ಯಕ್ತಿಗಳಾದ ವಿಡುದಲೈ ಚಿರುತೈಗಲ್ ಕಚ್ಚಿ ನಾಯಕ ಹಾಗೂ ಸಂಸದ ತೋಲ್. ತಿರುಮವಲವನ್, ಶಾಸಕ ತನಿಯರಸು, ಮನಿತನೇಯ ಮಕ್ಕಳ್ ಕಚ್ಚಿ ನಾಯಕ ಮತ್ತು ಶಾಸಕ ಜವಾಹಿರುಲ್ಲಾ, ಮೇ 17 ಚಳವಳಿಯ ಸಮನ್ವಯಕಾರ ತಿರುಮುರುಗನ್ ಗಾಂಧಿ, ನಟರಾದ ಸತ್ಯರಾಜ್, ಪ್ರಕಾಶ್ ರಾಜ್, ಚಿತ್ರ ನಿರ್ಮಾಪಕ ವೆಟ್ರಿ ಮಾರನ್ ಹಾಗೂ ಇನ್ನಿತರ ಹಲವಾರು ನಾಯಕರು ಪಾಲ್ಗೊಂಡಿದ್ದರು.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ರಾಜ್, “ಇದು ಮಾನವೀಯತೆಗಾಗಿ ಮಾತನಾಡುವವರ ಸಭೆಯಾಗಿದೆ. ಇಂತಹ ಸಭೆಗಳನ್ನು ಯಾಕೆ ನಡೆಸುತ್ತೀರಿ ಎಂದು ಕೆಲವರು ಪ್ರಶ್ನಿಸುತ್ತಾರೆ. ಅನ್ಯಾಯದ ವಿರುದ್ಧ ಮಾತನಾಡುವುದು ರಾಜಕೀಯವಾಗುವುದಾದರೆ, ಹೌದು, ಇದು ರಾಜಕೀಯ, ನಾವು ಮಾತನಾಡುತ್ತೇವೆ” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಮೌನವನ್ನು ಟೀಕಿಸಿದ ಪ್ರಕಾಶ್ ರಾಜ್, “ಈ ಕೃತ್ಯಕ್ಕೆ ಇಸ್ರೇಲ್ ಒಂದೇ ಜವಾಬ್ದಾರವಲ್ಲ. ಅಮೆರಿಕ ಕೂಡಾ ಜವಾಬ್ದಾರಿ. ಮೋದಿಯ ಮೌನ ಕೂಡಾ ಜವಾಬ್ದಾರಿ” ಎಂದು ಆರೋಪಿಸಿದ್ದಾರೆ.
ಗಾಝಾದಲ್ಲಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ ನಟ ಸತ್ಯರಾಜ್, ಅದನ್ನು ಸಹಿಸಲು ಸಾಧ್ಯವಿಲ್ಲ ಹಾಗೂ ಅದು ಮಾನವೀಯತೆಯ ಉಲ್ಲಂಘನೆಯಾಗಿದೆ ಎಂದು ಟೀಕಿಸಿದ್ದಾರೆ.
ಗಾಝಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿದ ವೆಟ್ರಿಮಾರನ್, ಇದು ಯೋಜಿತ ಜನಾಂಗೀಯ ಹತ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.
ವಿಡುದಲೈ ಚಿರುತೈಗಳ್ ಕಚ್ಚಿ ನಾಯಕ ಹಾಗೂ ಸಂಸದ ತೋಲ್. ತಿರುಮವಲನ್, ತಿರುಮುರುಗನ್ ಗಾಂಧಿ ಕೂಡಾ ಗಾಝಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿದರು ಹಾಗೂ ಇಸ್ರೇಲ್ ಅನ್ನು ಜನಾಂಗೀಯ ಹತ್ಯೆ ದೇಶ ಎಂದು ಘೋಷಿಸಬೇಕು ಮತ್ತು ಫೆಲೆಸ್ತೀನ್ ಅನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಗುರುತಿಸಬೇಕು ಎಂದು ಆಗ್ರಹಿಸಿದ್ದಾರೆ.
PC : X - @thirumaofficial







