ಫೆಲೆಸ್ತೀನ್- ಇಸ್ರೇಲ್ ಬಿಕ್ಕಟ್ಟು | ದ್ವಿ-ರಾಷ್ಟ್ರ ಪರಿಹಾರಕ್ಕೆ ಯಾವುದೇ ಪರ್ಯಾಯವಿಲ್ಲ: ವಿಶ್ವಸಂಸ್ಥೆ ಮುಖ್ಯಸ್ಥ

ಆಂಟೋನಿಯೊ ಗುಟೆರಸ್ | Photo Credit : AP
ನ್ಯೂಯಾರ್ಕ್: ಭಾವಿ ಫೆಲೆಸ್ತೀನ್ ರಾಷ್ಟ್ರದ ಅಡಿಪಾಯಗಳನ್ನು ಉರುಳಿಸಲಾಗುತ್ತಿದ್ದು, ಸಮಯ ಮೀರಿಹೋಗುತ್ತಿದೆ ಎಂದು ಎಚ್ಚರಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ದ್ವಿ-ರಾಷ್ಟ್ರ ಪರಿಹಾರಕ್ಕೆ ಬೇರೆ ಯಾವುದೇ ಪರ್ಯಾಯವಿಲ್ಲ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಹಾಸಭೆಯ ನೇಪಥ್ಯದಲ್ಲಿ ನಡೆದ ದ್ವಿ-ರಾಷ್ಟ್ರ ಪರಿಹಾರ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಗುಟೆರಸ್ ` 1967ಕ್ಕಿಂತ ಮೊದಲಿಗಿದ್ದ ಗಡಿರೇಖೆಗಳು, ಅಂತರ್ರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ಹಿಂದಿನ ಒಪ್ಪಂದಗಳನ್ನು ಆಧರಿಸಿದ ದ್ವಿ-ರಾಷ್ಟ್ರ ಪರಿಹಾರವೇ ಫೆಲೆಸ್ತೀನಿಯನ್ನರು ಮತ್ತು ಇಸ್ರೇಲಿಗರಿಗೆ ಹಾಗೂ ಇಡೀ ಪ್ರದೇಶಕ್ಕೆ ಶಾಶ್ವತ ಶಾಂತಿ ಮತ್ತು ಭದ್ರತೆಯನ್ನು ತರಬಲ್ಲ ಏಕೈಕ ವಿಶ್ವಾಸಾರ್ಹ ಮಾರ್ಗ ಎಂಬುದನ್ನು ಹಲವು ದೇಶಗಳು ಒಪ್ಪಿಕೊಂಡಿವೆ. ಈ ಪ್ರಗತಿಯ ಹೊರತಾಗಿಯೂ, ಸ್ವತಂತ್ರ ಮತ್ತು ಸಾರ್ವಭೌಮ ಫೆಲೆಸ್ತೀನಿಯನ್ ರಾಷ್ಟ್ರಕ್ಕೆ ಬೇಕಾದ ವಾತಾವರಣವನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಎಂದು ಎಚ್ಚರಿಸಿದರು.
ದ್ವಿ-ರಾಷ್ಟ್ರಕ್ಕೆ ಬೆಂಬಲವು ಕೇವಲ ಮಾತುಗಳಿಗೆ ಸೀಮಿತವಾಗದೆ, ನೀತಿಗಳು, ನಿರ್ಧಾರಗಳು ಮತ್ತು ಕ್ರಿಯೆಗಳಲ್ಲಿ ಪ್ರತಿಫಲಿಸಬೇಕು.
ವಸಾಹತು ವಿಸ್ತರಣೆಯನ್ನು ತಡೆಯಲು, ಆಕ್ರಮಣವನ್ನು ನಿಲ್ಲಿಸಲು, ಫೆಲೆಸ್ತೀನಿಯನ್ ಸಂಸ್ಥೆಗಳಿಗೆ ಹಾಗೂ ಅವುಗಳ ಆರ್ಥಿಕತೆಗೆ ಬೆಂಬಲ ನೀಡಲು ಮತ್ತು ಆಕ್ರಮಣವನ್ನು ಕೊನೆಗೊಳಿಸಿ ಫೆಲೆಸ್ತೀನ್ ಆತ್ಮನಿರ್ಣಯದ ಹಕ್ಕನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜಕೀಯ ಪ್ರಕ್ರಿಯೆಯನ್ನು ವೇಗಗೊಳಿಸಲು ಅವರು ಸರಕಾರಗಳನ್ನು ಆಗ್ರಹಿಸಿದರು.
1967ಕ್ಕಿಂತ ಮೊದಲಿಗಿದ್ದ ಗಡಿಗಳ ಆಧಾರದ ಮೇಲೆ, ಜೆರುಸಲೇಂ ಅನ್ನು ಎರಡೂ ದೇಶಗಳ ರಾಜಧಾನಿಯನ್ನಾಗಿ ಮಾಡಿಕೊಂಡು, ಇಸ್ರೇಲ್ ಮತ್ತು ಫೆಲೆಸ್ತೀನ್ ಎಂಬ ಎರಡು ಸ್ವತಂತ್ರ, ಸಾರ್ವಭೌಮ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರಗಳು ಶಾಂತಿ ಮತ್ತು ಭದ್ರತೆಯಿಂದ ಪಕ್ಕಪಕ್ಕದಲ್ಲಿ ಬಾಳುವುದು ನಮ್ಮ ಉದ್ದೇಶವಾಗಿದೆ ಮತ್ತು ಇದಕ್ಕೆ ಬೇರೆ ಯಾವುದೇ ಪರ್ಯಾಯವಿಲ್ಲ ಎಂದು ಗುಟೆರಸ್ ಪ್ರತಿಪಾದಿಸಿದ್ದಾರೆ.
ಇಸ್ರೇಲ್ನ ನೀತಿಗೆ ಖಂಡನೆ
ಇಸ್ರೇಲ್ನ ನೀತಿಗಳು ಮತ್ತು ಕ್ರಮಗಳು ಕಾನೂನುಬಾಹಿರ ಹಾಗೂ ಅಮಾನ್ಯವಾದ ಆಕ್ರಮಣಕ್ಕೆ ಸಮಾನವಾಗಿರುವುದನ್ನು ಜಗತ್ತು ವೀಕ್ಷಿಸುತ್ತಿದೆ . ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿನ ಇಸ್ರೇಲಿ ವಸಾಹತುಗಳು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ.
ವಸಾಹತು ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಅಂಗೀಕಾರಗೊಂಡು ಸುಮಾರು ಒಂದು ದಶಕದ ನಂತರವೂ, ಪೂರ್ವ ಜೆರುಸಲೇಂ ಸೇರಿದಂತೆ ವೆಸ್ಟ್ ಬ್ಯಾಂಕ್ನಲ್ಲಿ ವಸಾಹತು ವಿಸ್ತರಣೆ ಭರದಿಂದ ಸಾಗುತ್ತಿದ್ದು, ವಸಾಹತುಶಾಹಿಗಳ ಹಿಂಸಾಚಾರವು ಆತಂಕಕಾರಿ ಮಟ್ಟಕ್ಕೆ ಏರುತ್ತಿದೆ ಎಂದು ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ.






