ನಿರ್ಣಾಯಕ ಹಂತ ತಲುಪಿದ ಫೆಲೆಸ್ತೀನ್ ಬಿಕ್ಕಟ್ಟು: ವಿಶ್ವಸಂಸ್ಥೆ ಕಳವಳ
ಎರಡು ರಾಷ್ಟ್ರ ಪರಿಹಾರ ಸೂತ್ರಕ್ಕೆ ಗುಟೆರಸ್ ಆಗ್ರಹ

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯ್ ಗುಟೆರಸ್ | PTI
ವಿಶ್ವಸಂಸ್ಥೆ, ಜು.29: ಇಸ್ರೇಲ್- ಫೆಲೆಸ್ತೀನ್ ಬಿಕ್ಕಟ್ಟು ನಿರ್ಣಾಯಕ ಹಂತ ತಲುಪಿದೆ. ಇದು ನಿರ್ಣಾಯಕ ತಿರುವಾಗಿರಬಹುದು. `ಕಾರ್ಯ ಸಾಧ್ಯವಾದ ಎರಡು ರಾಷ್ಟ್ರ ಪರಿಹಾರ ಸೂತ್ರ' ಈ ಬಿಕ್ಕಟ್ಟಿಗೆ ಪರಿಹಾರವಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆದ `ಇಸ್ರೇಲ್ ಮತ್ತು ಫೆಲೆಸ್ತೀನೀಯರಿಗೆ ಎರಡು ರಾಷ್ಟ್ರ ಪರಿಹಾರ ಸೂತ್ರ' ಕುರಿತ ಉನ್ನತ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಗುಟೆರಸ್ ತುರ್ತು ಕ್ರಮ ನಡೆಸುವ ಅಗತ್ಯ ಮತ್ತು ವಿಳಂಬದಿಂದ ಆಗುವ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
`ಹಲವು ದಶಕಗಳಿಂದ ಮಧ್ಯಪ್ರಾಚ್ಯ ರಾಜತಾಂತ್ರಿಕತೆಯು ಶಾಂತಿ ಸ್ಥಾಪಿಸುವ ಬದಲು ಕೇವಲ ಪ್ರಕ್ರಿಯೆಯಾಗಿ ಮುಂದುವರಿದಿದೆ. ಪದಗಳು, ಭಾಷಣಗಳು, ಘೋಷಣೆಗಳು ವಾಸ್ತವ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಇವುಗಳನ್ನೂ ಈ ಹಿಂದೆಯೂ ನೋಡಿದ್ದೇವೆ, ಕೇಳಿದ್ದೇವೆ. ಅದರ ನಡುವೆಯೇ ವಿನಾಶ, ಸ್ವಾಧೀನ ಪ್ರಕ್ರಿಯೆ ಎಗ್ಗಿಲ್ಲದೆ ಮುಂದುವರಿಯುತ್ತಿದೆ. ಈ ಬಿಕ್ಕಟ್ಟಿಗೆ ವಿಶ್ವಸಂಸ್ಥೆಯ ನಿರ್ಣಯಕ್ಕೆ ಅನುಸಾರವಾಗಿ, ಜೆರುಸಲೇಂ ಅನ್ನು ರಾಜಧಾನಿಯಾಗಿ ಹೊಂದಿರುವ ಎರಡು ಸ್ವತಂತ್ರ, ಪ್ರಜಾಪ್ರಭುತ್ವ ರಾಷ್ಟ್ರಗಳ(ಇಸ್ರೇಲ್ ಮತ್ತು ಫೆಲೆಸ್ತೀನ್) ಸ್ಥಾಪನೆ ಮಾತ್ರ ಸುಸ್ಥಿರ ಮತ್ತು ನ್ಯಾಯಸಮ್ಮತ ಪರಿಹಾರ ಮಾರ್ಗವಾಗಿದೆ ಎಂದವರು ಪ್ರತಿಪಾದಿಸಿದ್ದಾರೆ.
ಎರಡು ರಾಷ್ಟ್ರ ಪರಿಹಾರ ಸೂತ್ರದ ಬಗ್ಗೆ ಕ್ರಮ ಕೈಗೊಳ್ಳಲು ಜಾಗತಿಕ ಸಮುದಾಯವನ್ನು ಆಗ್ರಹಿಸುವ ಉದ್ದೇಶದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಹಲವು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆದರೆ ಅಮೆರಿಕ ಮತ್ತು ಇಸ್ರೇಲ್ ಸಮ್ಮೇಳನವನ್ನು ಬಹಿಷ್ಕರಿಸಿವೆ. 2025ರಲ್ಲಿ ಈ ಸಮ್ಮೇಳನವನ್ನು ಆಯೋಜಿಸಲು ಕಳೆದ ವರ್ಷದ ಸೆಪ್ಟಂಬರ್ನಲ್ಲಿ 193 ಸದಸ್ಯ ಬಲದ ವಿಶ್ವಸಂಸ್ಥೆ ಸಾಮಾನ್ಯ ಸಭೆ ನಿರ್ಧರಿಸಿತ್ತು. ಆದರೆ ಇರಾನಿನ ಮೇಲೆ ಇಸ್ರೇಲ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಮುಂದೂಡಲಾಗಿತ್ತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸೌದಿ ಅರೆಬಿಯಾದ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅಲ್-ಸೌದ್ `ಫೆಲೆಸ್ತೀನಿಯನ್ ರಾಷ್ಟ್ರಕ್ಕೆ ಮಾನದಂಡವನ್ನು ಹಾಕುವ ಮಾರ್ಗಸೂಚಿ ಸಮ್ಮೇಳನವನ್ನು ಬೆಂಬಲಿಸುವಂತೆ' ಎಲ್ಲಾ ರಾಷ್ಟ್ರಗಳನ್ನೂ ಆಗ್ರಹಿಸಿದರು. `ಗಾಝಾದಲ್ಲಿನ ಯುದ್ಧ ಕೊನೆಗೊಳಿಸುವುದರಿಂದ ಹಿಡಿದು ಇಸ್ರೇಲ್-ಫೆಲೆಸ್ತೀನಿಯನ್ ಬಿಕ್ಕಟ್ಟನ್ನು ಕೊನೆಗೊಳಿಸುವ ವರೆಗಿನ ಮಾರ್ಗ ಹಾಗೂ ವಿಧಾನದ ಬಗ್ಗೆ ನಾವು ಕಾರ್ಯನಿರ್ವಹಿಸಬೇಕು. ಇಸ್ರೇಲ್ ಮತ್ತು ಫೆಲೆಸ್ತೀನ್ ನ ಜನತೆ ಶಾಂತಿಯಿಂದ ಸಹಬಾಳ್ವೆ ನಡೆಸಲು ರಾಜಕೀಯ ಮಾರ್ಗದ ಎರಡು ರಾಷ್ಟ್ರ ಪರಿಹಾರ ಸೂತ್ರ ಮಾತ್ರ ಸೂಕ್ತವಾಗಿದೆ' ಎಂದು ಫ್ರಾನ್ಸ್ನ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರೊಟ್ ಹೇಳಿದರು.
ಎಲ್ಲಾ ದೇಶಗಳೂ ವಿಳಂಬವಿಲ್ಲದೇ ಫೆಲೆಸ್ತೀನ್ ರಾಷ್ಟ್ರವನ್ನು ಮಾನ್ಯ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ರಾಷ್ಟ್ರಗಳೂ ಈಗ ತಮ್ಮ ಹೊಣೆಗಾರಿಕೆ ನಿರ್ವಹಿಸಬೇಕು ಎಂದು ಫೆಲೆಸ್ತೀನಿನ ಪ್ರಧಾನಿ ಮುಹಮ್ಮದ್ ಮುಸ್ತಫಾ ಆಗ್ರಹಿಸಿದ್ದಾರೆ.
►ಅಮೆರಿಕ-ಇಸ್ರೇಲ್ ಬಹಿಷ್ಕಾರ
ಗಾಝಾದಲ್ಲಿನ ಯುದ್ಧವನ್ನು ಕೊನೆಗೊಳಿಸುವಂತೆ ಇಸ್ರೇಲ್ ನ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚುತ್ತಿದ್ದರೂ, ಸಮ್ಮೇಳನದಲ್ಲಿ ಅಮೆರಿಕ ಮತ್ತು ಇಸ್ರೇಲ್ ನ ಪ್ರತಿನಿಧಿಗಳು ಪಾಲ್ಗೊಂಡಿಲ್ಲ.
ಮೂರು ದಿನಗಳ ಕಾರ್ಯಕ್ರಮವು ಅನುತ್ಪಾದಕ ಮತ್ತು ಸೂಕ್ತವಲ್ಲದ ಸಮಯದಲ್ಲಿ ಆಯೋಜನೆಗೊಂಡಿದೆ. ಇದೊಂದು ಶಾಂತಿ ಹುಡುಕುವ ಪ್ರಯತ್ನವನ್ನು ಮತ್ತಷ್ಟು ಕಠಿಣಗೊಳಿಸುವ ಪ್ರಚಾರದ ಸ್ಟಂಟ್ ಆಗಿದೆ. ರಾಜತಾಂತ್ರಿಕ ಒತ್ತಡವು ಭಯೋತ್ಪಾದನೆಯನ್ನು ಪುರಸ್ಕರಿಸಿದಂತಾಗುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.







