ಫೆಲೆಸ್ತೀನ್ ಅಧ್ಯಕ್ಷ ಅಬ್ಬಾಸ್ ಸಹಿತ ಫೆಲೆಸ್ತೀನ್ ನ 81 ಅಧಿಕಾರಿಗಳ ವೀಸಾ ರದ್ದುಗೊಳಿಸಿದ ಅಮೆರಿಕ

PC : aljazeera.com
ವಾಷಿಂಗ್ಟನ್, ಆ.30: ಮುಂದಿನ ತಿಂಗಳು ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಗೂ ಮುನ್ನ ಫೆಲೆಸ್ತೀನಿಯನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಹಾಗೂ ಫೆಲೆಸ್ತೀನಿಯನ್ ಪ್ರಾಧಿಕಾರದ ಇತರ 80 ಅಧಿಕಾರಿಗಳ ವೀಸಾವನ್ನು ಅಮೆರಿಕ ರದ್ದುಗೊಳಿಸಿರುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಫೆಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್(ಪಿಎಲ್ಒ)ಗೆ ಸಂಬಂಧಿಸಿದ ವ್ಯಕ್ತಿಗಳು ಸೇರಿದಂತೆ ಫೆಲೆಸ್ತೀನಿಯನ್ ಅಧಿಕಾರಿಗಳಿಗೆ ಹೊಸ ವೀಸಾ ಅರ್ಜಿಯನ್ನು ನಿರಾಕರಿಸುವಂತೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಸೂಚಿಸಿರುವುದಾಗಿ ಇಲಾಖೆ ಹೇಳಿದೆ. ತಮ್ಮ ಬದ್ಧತೆಗಳನ್ನು ಅನುಸರಿಸದ ಕಾರಣಕ್ಕಾಗಿ ಮತ್ತು ಶಾಂತಿಯ ಭವಿಷ್ಯವನ್ನು ದುರ್ಬಲಗೊಳಿಸುವುದಕ್ಕಾಗಿ ಪಿಎಲ್ಒ ಮತ್ತು ಪಿಎ(ಫೆಲೆಸ್ತೀನಿಯನ್ ಪ್ರಾಧಿಕಾರ)ಯನ್ನು ಹೊಣೆಗಾರರನ್ನಾಗಿ ಮಾಡುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿದೆ ಎಂದು ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.
ಅಮೆರಿಕದ ಕ್ರಮವನ್ನು ಟೀಕಿಸಿರುವ ಫ್ರಾನ್ಸ್ನ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯರೋಟ್ `ಮುಂದಿನ ತಿಂಗಳು ನಡೆಯುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಯಾವುದೇ ನಿರ್ಬಂಧ ಇರಕೂಡದು ಎಂದಿದ್ದಾರೆ.
ಅಂತರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆ ಪ್ರಧಾನ ಕಚೇರಿ ಒಪ್ಪಂದಕ್ಕೆ ವಿರುದ್ಧವಾಗಿರುವ ನಿರ್ಧಾರವನ್ನು ಹಿಂಪಡೆಯುವಂತೆ ಫೆಲೆಸ್ತೀನಿಯನ್ ಪ್ರಾಧಿಕಾರ ಅಮೆರಿಕಾವನ್ನು ಆಗ್ರಹಿಸಿದೆ. ವಿಶ್ವಸಂಸ್ಥೆಯ ಕೇಂದ್ರ ಕಚೇರಿ ನ್ಯೂಯಾರ್ಕ್ ನಲ್ಲಿದೆ. ಆತಿಥೇಯ ರಾಷ್ಟ್ರವಾಗಿ ಅಮೆರಿಕವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಯಾವುದೇ ಅಧಿಕಾರಿಗಳಿಗೆ ವೀಸಾ ನಿರಾಕರಿಸುವಂತಿಲ್ಲ. 2012ರಿಂದ ಫೆಲೆಸ್ತೀನ್ ಪ್ರತಿನಿಧಿಗಳಿಗೆ ವಿಶ್ವಸಂಸ್ಥೆಯಲ್ಲಿ ಸದಸ್ಯೇತರ ವೀಕ್ಷಕ ಸ್ಥಾನಮಾನ ನೀಡಲಾಗಿದ್ದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಚರ್ಚೆಯಲ್ಲಿ ಪಾಲ್ಗೊಳ್ಳಲು ವೇದಿಕೆ ಕಲ್ಪಿಸಲಾಗಿದೆ.







