ಡೊನಾಲ್ಡ್ ಟ್ರಂಪ್ ರ ಗಾಝಾ ಕಲ್ಪನೆಗೆ AI ವೀಡಿಯೊ ಮೂಲಕವೇ ಫೆಲೆಸ್ತೀನ್ ತಿರುಗೇಟು

AI video screengrab | @sahatenglish
ಗಾಝಾ: ಅಮೆರಿಕ ಸ್ವಾಧೀನದಲ್ಲಿನ ಗಾಝಾ ಕುರಿತ ಮುನ್ನೋಟವನ್ನು ಹೊಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಕೃತಕ ಬುದ್ಧಿಮತ್ತೆ(AI) ಚಾಲಿತ ವೀಡಿಯೊಗೆ ತಿರುಗೇಟು ನೀಡಿರುವ ಫೆಲೆಸ್ತೀನ್, ‘ಗಾಝಾ ಎಂದಿಗೂ ಪೆಲೆಸ್ತೀನಿಯನ್ನರಿಗೆ ಸೇರಿದ್ದು’ ಎಂದು ಘೋಷಿಸುವ ಕೃತಕ ಬುದ್ಧಿಮತ್ತೆ ವೀಡಿಯೊವೊಂದನ್ನು ನಿರ್ಮಿಸಿದೆ.
ಈ ವೀಡಿಯೊವನ್ನು ಫೆಲೆಸ್ತೀನಿಯನ್ನರ ಡಿಜಿಟಲ್ ಮಾಧ್ಯಮ ವೇದಿಕೆ SahatEnglish ನ ಎಕ್ಸ್ ಖಾತೆಯ ಮೂಲಕ ಹಂಚಿಕೊಳ್ಳಲಾಗಿದ್ದು, “ಟ್ರಂಪ್ ಗೊಂದು ಸಂದೇಶ: ಗಾಝಾ ಎಂದಿಗೂ ಫೆಲೆಸ್ತೀನಿಯನರಿಗೆ ಸೇರಿದ್ದು!” ಎಂದು ಪೋಸ್ಟ್ ಮಾಡಲಾಗಿದೆ.
ಟ್ರಂಪ್ ರ ವೀಡಿಯೊದಲ್ಲಿ ಆರಂಭದಲ್ಲಿ ಕಾಣಿಸಿಕೊಳ್ಳುವ ‘ಗಾಝಾ 2025, ಮುಂದೇನು?” ಎಂಬ ವಾಕ್ಯದೊಂದಿಗೇ ಈ ವೀಡಿಯೊ ಕೂಡಾ ಪ್ರಾರಂಭಗೊಂಡರೂ, ಹಮಾಸ್ ನ ಅಲ್ ಕಸಮ್ ಬ್ರಿಗೇಡ್ಸ್ ನ ಸದಸ್ಯರೊಬ್ಬರಿಗೆ ಅವಶೇಷಗಳ ನಡುವಿನಿಂದ ಮಗುವೊಂದು ಹೂಗಳನ್ನು ನೀಡುತ್ತಿರುವ ದೃಶ್ಯವನ್ನು ಒಳಗೊಂಡಿದೆ.
ನಂತರದ ತುಣುಕಿನಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನವಿರಾಮ ಏರ್ಪಟ್ಟ ನಂತರ ಸಾವಿರಾರು ಫೆಲೆಸ್ತೀನಿಯನ್ನರು ಉತ್ತರ ಗಾಝಾದಲ್ಲಿರುವ ತಮ್ಮ ನಿವಾಸಗಳಿಗೆ ಮರಳುತ್ತಿರುವ ದೃಶ್ಯವನ್ನು ಈ ವೀಡಿಯೊ ತೋರಿಸುತ್ತದೆ.
ಇದಾದ ನಂತರ, ಸಂಪದ್ಭರಿತ ಸಾಂಸ್ಕೃತಿಕ ಪರಂಪರೆ, ಮಸೀದಿಗಳು ಹಾಗೂ ಗಗನಚುಂಬಿ ಕಟ್ಟಡಗಳೊಂದಿಗೆ ಗಾಝಾ ಮಹಾನಗರವು ಜೀವಂತಿಕೆಯಿಂದ ನಳನಳಿಸುತ್ತಾ, ಪ್ರವರ್ಧಮಾನಕ್ಕೆ ಬರುತ್ತಿರುವ ದೃಶ್ಯವನ್ನು ಈ ವೀಡಿಯೊ ಒಳಗೊಂಡಿದೆ. ಸಮುದ್ರ ತೀರದಲ್ಲಿ ಯವಜನರು ಸಾಂಪ್ರದಾಯಿಕ ದಿರಿಸುಗಳನ್ನು ತೊಟ್ಟು, ಫೆಲೆಸ್ತೀನ್ ನ ದಬ್ಕೇಹ್ ಜಾನಪದ ನೃತ್ಯದಲ್ಲಿ ತೊಡಗಿರುವ ದೃಶ್ಯವನ್ನೂ ಒಳಗೊಂಡಿದೆ. ಇದು ಡೊನಾಲ್ಡ್ ಟ್ರಂಪ್ ರ ವೀಡಿಯೊದಲ್ಲಿ ಕಂಡು ಬಂದಿದ್ದ ಗಡ್ಡ ಬಿಟ್ಟ ಬೆಲ್ಲಿ ನರ್ತಕರ ದೃಶ್ಯಕ್ಕೆ ನೀಡಿರುವ ನೇರ ಪ್ರತಿಕ್ರಿಯೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಟ್ರಂಪ್ ರ ವೀಡಿಯೊದಲ್ಲಿ ಕಂಡು ಬಂದಿದ್ದ ಮಗುವೊಂದು ಟ್ರಂಪ್ ರ ಮುಖವಿರುವ ಬಲೂನ್ ಹಿಡಿದುಕೊಂಡಿರುವ ದೃಶ್ಯಕ್ಕೆ ಪ್ರತಿಕ್ರಿಯೆಯೆಂಬಂತೆ ಫೆಲೆಸ್ತೀನ್ ಮಗುವೊಂದು “ನಾನು ಗಾಝಾವನ್ನು ಪ್ರೀತಿಸುತ್ತೇನೆ” ಎಂಬ ಬಲೂನು ಹಿಡಿದುಕೊಂಡಿರುವ ದೃಶ್ಯವನ್ನೂ ಈ ವೀಡಿಯೊದಲ್ಲಿ ಕಾಣಬಹುದಾಗಿದೆ. ವೀಡಿಯೊ ಹಿನ್ನೆಲೆಯಲ್ಲಿ “ಗಾಝಾ ನಮ್ಮದು.. ಅದು ಯಾರೇ ಇರಲಿ, ಅದು ಏನೇ ಆಗಿರಲಿ, ನಾವು ಎದೆಗುಂದದೆ ನಿಲ್ಲುತ್ತೇವೆ. ನಾವಿಲ್ಲಿದ್ದೇವೆ, ನಾವು ಇಲ್ಲಿಯೇ ಉಳಿಯುತ್ತೇವೆ, ನೋವಿನ ನಡುವೆ ಗಾಝಾ ಮೇಲೆದ್ದು ನಿಲ್ಲಲಿದೆ” ಎಂಬ ಸಾಹಿತ್ಯಕ್ಕೆ ರಾಕ್ ಶೈಲಿಯಲ್ಲಿ ಸಂಯೋಜಿಸಲಾಗಿರುವ ಸಂಗೀತ ಕೇಳಿ ಬರುತ್ತದೆ.
ಗಮನಾರ್ಹ ಸಂಗತಿಯೆಂದರೆ, ಈ ಹಿಂದಿನ ವೀಡಿಯೊದಲ್ಲಿ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ರನ್ನು ತೋರಿಸಿರುವುದಕ್ಕಿಂತ ಭಿನ್ನವಾಗಿ ಅವರು ಹೆಣಗಾಡುತ್ತಿರುವಂತೆ ಫೆಲೆಸ್ತೀನ್ ವೀಡಿಯೊದಲ್ಲಿ ತೋರಿಸಲಾಗಿದೆ.
ಟ್ರಂಪ್ ಹಾಗೂ ನೆತನ್ಯಾಹು ಜೈಲು ಸಮವಸ್ತಗಳನ್ನು ತೊಟ್ಟು, ಹತಾಶರಾಗಿರುವಂತೆ, ಮಸ್ಕ್ ಸಂಕಟಕ್ಕೀಡಾಗಿರುವಂತೆ ವೀಡಿಯೊದಲ್ಲಿ ತೋರಿಸಲಾಗಿದೆ. ಮಸ್ಕ್ ಹಿನ್ನೆಲೆಯಲ್ಲಿ ಶೇರು ಮಾರುಕಟ್ಟೆ ಪತನಗೊಳ್ಳುತ್ತಿರುವುದನ್ನು ತೋರಿಸುತ್ತಿರುವ ಚಿತ್ರಗಳು ಕಂಡು ಬರುತ್ತವೆ.
ಗಾಝಾ ನಗರದ ಮಧ್ಯೆ ಫೆಲೆಸ್ತೀನ್ ಧ್ವಜ ಆಕಾಶದೆತ್ತರದಲ್ಲಿ ಹಾರಾಡುತ್ತಿರುವ ದೃಶ್ಯವನ್ನೂ ಈ ವೀಡಿಯೊದಲ್ಲಿ ತೋರಿಸಲಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವಾರು ಬಳಕೆದಾರರು ಈ ಸಂಪದ್ಭರಿತ ನಗರಕ್ಕೆ ಭೇಟಿ ನೀಡುವ ಕಲ್ಪನೆ ಹಂಚಿಕೊಂಡಿದ್ದಾರೆ.
“ಇದು ಇಷ್ಟವಾಯಿತು! ನಾನು ಖಂಡಿತ ಭೇಟಿ ನೀಡಲಿದ್ದೇನೆ” ಎಂದು ಓರ್ವ ಬಳಕೆದಾರರು ಈ ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, “ಜನಾಂಗೀಯ ಹತ್ಯೆಯ ನಡುವೆ ಜೀವಿಸುತ್ತಿದ್ದರೂ, ಇಸ್ರೇಲ್ ನ ದೌರ್ಜನ್ಯಕ್ಕೆ ಹಲವು ತಲೆಮಾರುಗಳನ್ನೇ ಕಳೆದುಕೊಂಡಿದ್ದರೂ, ಹಲವು ಮಂದಿ ತಮ್ಮ ತಾಯ್ನೆಲದ ಹೊರಗೆ ಸಿಲುಕಿಕೊಂಡಿದ್ದರೂ, ಟ್ರಂಪ್ ರ ಕೃತಕ ಬುದ್ಧಿಮತ್ತೆ(AI) ಚಾಲಿತ ವೀಡಿಯೊಗೆ ಹೇಗೆ ತಕ್ಕ ತಿರುಗೇಟು ನೀಡಬೇಕು ಎಂಬುದು ಯುವ ಗಾಝಾದವರಿಗೆ ತಿಳಿದಿದೆ” ಎಂದು ಪ್ರಶಂಸಿಸಿದ್ದಾರೆ.







