ಗಾಝಾ ಕದನ ವಿರಾಮ | ಖಾನ್ ಯೂನಿಸ್ಗೆ ಆಗಮಿಸಿದ ಇಸ್ರೇಲ್ ಬಿಡುಗಡೆ ಮಾಡಿದ ಫೆಲೆಸ್ತೀನಿಯರು

Photo Credit: aljazeera.com
ಖಾನ್ ಯೂನಿಸ್ (ಗಾಝಾ): ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಒಪ್ಪಂದದ ಭಾಗವಾಗಿ ಬಿಡುಗಡೆಗೊಂಡ ಫೆಲೆಸ್ತೀನಿಯನ್ ಬಂಧಿತರ ಬಸ್ಗಳು ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರಕ್ಕೆ ತಲುಪಿವೆ. ಬಂಧಿತರ ಆಗಮನದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸ್ಥಳೀಯ ಜನರಲ್ಲಿ ಸಂತಸ ಮುಗಿಲು ಮುಟ್ಟಿದೆ ಎಂದು Aljazeera ವರದಿ ಮಾಡಿದೆ.
ಕದನ ವಿರಾಮ ಯೋಜನೆಯಡಿ ಇಸ್ರೇಲ್ ಒಟ್ಟು 154 ಫೆಲೆಸ್ತೀನಿನ ಒತ್ತೆಯಾಳುಗಳನ್ನು ಈಜಿಪ್ಟ್ ಗೆ ಕಳುಹಿಸಿದೆ ಎಂದು ಕೈದಿಗಳ ಮಾಧ್ಯಮ ಕಚೇರಿ ಅಧಿಕೃತ ಪ್ರಕಟಣೆ ನೀಡಿದೆ.
“ವಿದೇಶಕ್ಕೆ ಗಡೀಪಾರುಗೊಳಿಸಲಾದ 154 ಫೆಲೆಸ್ತೀನಿನ ಬಂಧಿತರನ್ನು ಸ್ವೀಕರಿಸಲಾಗಿದ್ದು, ಫ್ರೀ ಫ್ಲಡ್–3 ಒಪ್ಪಂದದ ಅನುಷ್ಠಾನದ ಅಂಗವಾಗಿ ಅವರ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಲು ಈಜಿಪ್ಟ್ ಅರಬ್ ಗಣರಾಜ್ಯಕ್ಕೆ ವರ್ಗಾಯಿಸಲಾಗಿದೆ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಂಧಿತರ ಆಗಮನದ ಹಿನ್ನೆಲೆಯಲ್ಲಿ ದಕ್ಷಿಣ ಗಾಝಾದ ನಾಸರ್ ಆಸ್ಪತ್ರೆಗೆ ಸಾವಿರಾರು ಫೆಲೆಸ್ತೀನಿಯನ್ನರು ಸೇರಿದ್ದು, ಬಂಧಿತರಾದ ತಮ್ಮ ಕುಟುಂಬ ಸದಸ್ಯರನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದರು. ಮುಂಜಾನೆಯಿಂದಲೇ ಜನಸಮೂಹ ಆಗಮಿಸಲು ಪ್ರಾರಂಭವಾಗಿದ್ದು, ಆಸ್ಪತ್ರೆ ಸುತ್ತಮುತ್ತ ಸುರಕ್ಷತೆ ಕೈಗೊಳ್ಳಲಾಗಿದೆ.
ಒಪ್ಪಂದದ ಅಂಗವಾಗಿ ಇಂದೇ ಸುಮಾರು 1,700 ಫೆಲೆಸ್ತೀನಿನ ಬಂಧಿತ ಒತ್ತೆಯಾಳುಗಳ ಬಿಡುಗಡೆಯ ನಿರೀಕ್ಷೆಯಿದೆ. ವರ್ಷಗಳ ಕಾಲ ಇಸ್ರೇಲಿನ ಜೈಲುಗಳಲ್ಲಿ ಕಠಿಣ ಹಾಗೂ ಅವಮಾನಕರ ಪರಿಸ್ಥಿತಿಯನ್ನು ಎದುರಿಸಿದ್ದ ಬಂಧಿತರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ವೈದ್ಯಕೀಯ ತಂಡಗಳು ಆಸ್ಪತ್ರೆಯಲ್ಲಿ ಸಜ್ಜಾಗಿವೆ.
ಗಾಝಾದ ಆರೋಗ್ಯ ಸಚಿವಾಲಯ ಬಿಡುಗಡೆಗೊಂಡ ಒತ್ತೆಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ಮತ್ತು ಆರೈಕೆಯನ್ನು ಒದಗಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.
“ಬಂಧಿತರ ಆರೋಗ್ಯದ ದೃಷ್ಟಿಯಿಂದ ಸೂಕ್ತ ವೈದ್ಯಕೀಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ,” ಎಂದು ಸಚಿವಾಲಯ ಹೇಳಿದೆ.







