ಪನ್ನುನ್ ಹತ್ಯೆ ಸಂಚು: ನಿಖಿಲ್ ಗುಪ್ತಾಗೆ ಅಮೆರಿಕದಲ್ಲಿ 19 ವರ್ಷ 7 ತಿಂಗಳ ಜೈಲು

ಹೊಸದಿಲ್ಲಿ: ಅಮೆರಿಕದಲ್ಲಿ ಖಾಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಭಾರತೀಯ ಪ್ರಜೆ ನಿಖಿಲ್ ಗುಪ್ತಾಗೆ ಅಮೆರಿಕದ ನ್ಯಾಯಾಲಯ 19 ವರ್ಷ ಏಳು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ನಿಖಿಲ್ ಗುಪ್ತಾ, ಪನ್ನುನ್ ಹತ್ಯೆಗೆ ವ್ಯಕ್ತಿಯೊಬ್ಬನನ್ನು ನೇಮಿಸಲು ಹಣ ನೀಡುವ ಸಂಚು, ಹತ್ಯೆಗೆ ಸಂಚು ರೂಪಿಸಿದ ಆರೋಪ ಹಾಗೂ ಅಕ್ರಮ ಹಣ ವರ್ಗಾವಣೆ ಸಂಚಿನಲ್ಲಿ ಭಾಗಿಯಾಗಿರುವುದನ್ನು ಈ ವರ್ಷದ ಆರಂಭದಲ್ಲಿ ಒಪ್ಪಿಕೊಂಡಿದ್ದರು.
ಶುಕ್ರವಾರ 80 ನಿಮಿಷಗಳ ವಿಚಾರಣೆ ನಡೆಸಿದ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ವಿಕ್ಟರ್ ಮರೆರೊ, ಗುಪ್ತಾಗೆ 235 ತಿಂಗಳು (19 ವರ್ಷ ಏಳು ತಿಂಗಳು) ಜೈಲು ಶಿಕ್ಷೆ ಪ್ರಕಟಿಸಿದರು.
ಅಮೆರಿಕ ಮತ್ತು ಕೆನಡಾದ ದ್ವಿಪೌರತ್ವ ಹೊಂದಿರುವ ಭಾರತೀಯ ಮೂಲದ ವಕೀಲ ಗುರುಪತ್ವಂತ್ ಸಿಂಗ್ ಪನ್ನುನ್ ನನ್ನು ನ್ಯೂಯಾರ್ಕ್‌ನಲ್ಲಿ ಹತ್ಯೆ ಮಾಡಲು ಸಂಚು ರೂಪಿಸಿದ ಪ್ರಕರಣ ಇದಾಗಿದೆ. ಭಾರತೀಯ ಕಾನೂನಿನ ಅಡಿಯಲ್ಲಿ ಪನ್ನುನ್ ಘೋಷಿತ ಉಗ್ರನಾಗಿದ್ದು, ಆತ ನಡೆಸುತ್ತಿರುವ 'ಸಿಖ್ಸ್ ಫಾರ್ ಜಸ್ಟಿಸ್' (Sikhs for Justice) ಸಂಘಟನೆಯನ್ನು ನಿಷೇಧಿಸಲಾಗಿದೆ.
ತನ್ನ ಜೀವಕ್ಕೆ ಬೆದರಿಕೆ ಇರುವ ವಿಚಾರ ಬಹಿರಂಗವಾದ ಬಳಿಕ ಕಳೆದ 1,200 ದಿನಗಳಿಂದ (ಸುಮಾರು ನಾಲ್ಕು ವರ್ಷ) ವಕಾಲತ್ತು ವೃತ್ತಿ ಮುಂದುವರಿಸಲು ಸಾಧ್ಯವಾಗಿಲ್ಲ ಎಂದು ಪನ್ನುನ್ ಹೇಳಿದ್ದಾನೆ. ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿ ನಿಖಿಲ್ ಗುಪ್ತಾ ಕೂಡ ಸಂಕ್ಷಿಪ್ತ ಹೇಳಿಕೆ ನೀಡಿದ್ದಾರೆ.
ನ್ಯಾಯಾಲಯದ ವಿಚಾರಣೆಗೆ ಮುನ್ನ ನ್ಯೂಯಾರ್ಕ್ ನ ನ್ಯಾಯಾಲಯದ ಕಟ್ಟಡದ ಹೊರಗೆ ಪನ್ನುನ್ ನ ಹಲವಾರು ಬೆಂಬಲಿಗರು ಜಮಾಯಿಸಿದ್ದರು.
ಈ ಸಂಚಿನಲ್ಲಿ ಭಾರತದ ಯಾವುದೇ ಅಧಿಕಾರಿಗಳು ಭಾಗಿಯಾಗಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
DEA ಕಾರ್ಯಾಚರಣೆಯಲ್ಲಿ ಬಯಲಾದ ಸಂಚು
ಅಮೆರಿಕದ ಅಭಿಯೋಜಕರ ಪ್ರಕಾರ, ಆಗ ಭಾರತ ಸರ್ಕಾರದ ಉದ್ಯೋಗಿಯಾಗಿದ್ದ ವಿಕಾಶ್ ಯಾದವ್, 2023ರ ಮೇ ತಿಂಗಳಲ್ಲಿ ನಿಖಿಲ್ ಗುಪ್ತಾ ಅವರನ್ನು ಸಂಪರ್ಕಿಸಿ ಪನ್ನುನ್ ನನ್ನು ಹತ್ಯೆ ಮಾಡಲು ವ್ಯಕ್ತಿಯೊಬ್ಬನನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ್ದರು.
ಆರೋಪಪಟ್ಟಿಯ ಪ್ರಕಾರ, ಯಾದವ್ ಭಾರತದ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವಿಭಾಗದ ಅಡಿಯಲ್ಲಿ ಭಾರತದ ಬಾಹ್ಯ ಗುಪ್ತಚರ ಸಂಸ್ಥೆ 'ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್' (RAW) ಕಾರ್ಯನಿರ್ವಹಿಸುತ್ತದೆ.
ಯಾದವ್ ಸೂಚನೆಯಂತೆ ಗುಪ್ತಾ ವ್ಯಕ್ತಿಯೊಬ್ಬನನ್ನು ಸಂಪರ್ಕಿಸಿದ್ದರು. ಆತ ತನ್ನ ಅಪರಾಧ ಜಾಲದ ಸದಸ್ಯ ಎಂದು ಗುಪ್ತಾ ಭಾವಿಸಿದ್ದರು. ಆದರೆ ಆತ ಅಮೆರಿಕದ 'ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್' (DEA) ಜೊತೆ ಕೆಲಸ ಮಾಡುತ್ತಿದ್ದ ಗೌಪ್ಯ ಮಾಹಿತಿದಾರನಾಗಿದ್ದನು.
ಆ ಮಾಹಿತಿದಾರ ಗುಪ್ತಾನಿಗೆ ಮತ್ತೊಬ್ಬ ವ್ಯಕ್ತಿಯನ್ನು ಪರಿಚಯಿಸಿದ್ದನು. ಪನ್ನುನ್ ನನ್ನು ಹತ್ಯೆ ಮಾಡಲು ಆ ವ್ಯಕ್ತಿಯನ್ನು ನೇಮಿಸಿಕೊಳ್ಳಲು ಗುಪ್ತಾ ಮುಂದಾಗಿದ್ದರು. ಆದರೆ ಆತ ನಿಜವಾದ ಹಂತಕನಾಗಿರಲಿಲ್ಲ. DEAಯ ರಹಸ್ಯ ಕಾರ್ಯಾಚರಣೆಯ ಅಧಿಕಾರಿಯಾಗಿದ್ದನು.
ಪನ್ನುನ್ ಹತ್ಯೆಗೆ 1,00,000 ಡಾಲರ್ ನೀಡುವುದಾಗಿ ಯಾದವ್ ಒಪ್ಪಿಕೊಂಡಿದ್ದರು. ಈ ಪೈಕಿ 15,000 ಡಾಲರ್ ಮುಂಗಡ ಹಣವನ್ನು ನ್ಯೂಯಾರ್ಕ್ ನಲ್ಲಿ ನೀಡಲಾಗಿತ್ತು ಎಂದು ಅಮೆರಿಕದ ಅಭಿಯೋಜಕರು ಆರೋಪಿಸಿದ್ದಾರೆ.
ಪನ್ನುನ್ ನ ಮನೆಯ ವಿಳಾಸ, ಫೋನ್ ಸಂಖ್ಯೆಗಳು, ದೈನಂದಿನ ಚಟುವಟಿಕೆಗಳ ವಿವರ ಹಾಗೂ ಆತನ ಮೇಲೆ ನಿಗಾ ಇರಿಸಿದ್ದಾಗ ತೆಗೆದ ಫೋಟೋಗಳನ್ನು ಗುಪ್ತಾ ಆ ವ್ಯಕ್ತಿಗೆ ನೀಡಿದ್ದರು ಎಂದು ಆರೋಪಿಸಲಾಗಿದೆ.
2023ರ ಜೂನ್ 30ರಂದು ಜೆಕ್ ಗಣರಾಜ್ಯದ ಪ್ರಾಗ್ ನಲ್ಲಿ ನಿಖಿಲ್ ಗುಪ್ತಾ ಬಂಧನಕ್ಕೊಳಗಾಗಿದ್ದರು. 2024ರ ಜೂನ್ ನಲ್ಲಿ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಯಿತು. ವಿಕಾಶ್ ಯಾದವ್ ಇನ್ನೂ ಅಮೆರಿಕ ವಶಕ್ಕೆ ಸಿಕ್ಕಿಲ್ಲ.
2023ರ ನವೆಂಬರ್ ನಲ್ಲಿ ಅಮೆರಿಕ ಆರೋಪಪಟ್ಟಿ ಬಹಿರಂಗಪಡಿಸಿದ ಮರುದಿನವೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪ್ರತಿಕ್ರಿಯಿಸಿತ್ತು. ಭಾರತೀಯ ಅಧಿಕಾರಿಯೊಬ್ಬರ ಹೆಸರು ಪ್ರಕರಣದಲ್ಲಿ ಕೇಳಿಬಂದಿರುವುದು 'ಕಳವಳಕಾರಿ ವಿಷಯ' ಮತ್ತು ಇದು 'ಸರ್ಕಾರದ ನೀತಿಗೆ ವಿರುದ್ಧವಾಗಿದೆ' ಎಂದು ಹೇಳಿತ್ತು.
ಆರೋಪಗಳ ಪರಿಶೀಲನೆಗಾಗಿ ಭಾರತ ತನಿಖಾ ಸಮಿತಿಯನ್ನು ರಚಿಸಿತ್ತು. 2025ರ ಜನವರಿಯಲ್ಲಿ ಗೃಹ ಸಚಿವಾಲಯವು, ಹಿಂದೆ ಅಪರಾಧ ಹಿನ್ನೆಲೆ ಹಾಗೂ ನಂಟುಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿಸಿತ್ತು. ಆದರೆ ಆ ವ್ಯಕ್ತಿ ವಿಕಾಶ್ ಯಾದವ್ ಎಂದು ಸಚಿವಾಲಯ ಸ್ಪಷ್ಟಪಡಿಸಿರಲಿಲ್ಲ.
ಪನ್ನುನ್ ಅಮೆರಿಕದ ನ್ಯಾಯಾಲಯವೊಂದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ RAW ಮಾಜಿ ಮುಖ್ಯಸ್ಥ ಸಾಮಂತ್ ಗೋಯಲ್ ವಿರುದ್ಧ ಸಿವಿಲ್ ಮೊಕದ್ದಮೆ ದಾಖಲಿಸಿದ್ದಾನೆ. ಭಾರತ ಈ ಆರೋಪಗಳನ್ನು ತಳ್ಳಿಹಾಕಿದೆ.
'ಇಂತಹ ಆಧಾರರಹಿತ ಮೊಕದ್ದಮೆಗಳನ್ನು ನಾವು ತಿರಸ್ಕರಿಸುತ್ತೇವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಹೇಳಿದೆ.
ನ. 13ರಂದು ನ್ಯಾಯಾಲಯ ನೀಡಿದ ಆದೇಶದಲ್ಲಿ ದಿಲ್ಲಿಯ ನ್ಯಾಯಾಲಯಗಳ ಮೂಲಕ ಈ ಇಬ್ಬರು ಅಧಿಕಾರಿಗಳಿಗೆ ಸಮನ್ಸ್ ತಲುಪಿಸುವಂತೆ ನಿರ್ದೇಶನ ನೀಡಲಾಗಿತ್ತು.
ಇದಕ್ಕೂ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 'ನಮ್ಮ ಉನ್ನತ ಅಧಿಕಾರಿಗಳ ವಿರುದ್ಧ ಮಾಡಲಾಗಿರುವ ಕಟ್ಟುಕಥೆಯ ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ನಾವು ತಿರಸ್ಕರಿಸುತ್ತೇವೆ' ಎಂದು ಹೇಳಿದ್ದರು.







