ಪರಾಗ್ವೆ ಅಧ್ಯಕ್ಷರಾಗಿ ಉಪಾಧ್ಯಕ್ಷ ಅಲೈಯಾನ ಅಧಿಕಾರ ಸ್ವೀಕಾರ; ಪೆನಾ ಗೃಹಬಂಧನಕ್ಕೆ

ಸಾಂಟಿಯಾಗೊ ಪೆನಾ | Photo Credit : NDTV
ಅಸುನ್ಸಿಯೋನ್, ನ. 7: ಪರಾಗ್ವೆಯ ರಾಜಕೀಯ ಬಿಕ್ಕಟ್ಟು ಶನಿವಾರ ಮಹತ್ವದ ತಿರುವು ಪಡೆದುಕೊಂಡಿದೆ. ದೇಶದ ಉಪಾಧ್ಯಕ್ಷ ಪೆಡ್ರೊ ಅಲೈಯಾನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರದಿಂದ ವಜಾಗೊಂಡ ಮಾಜಿ ಅಧ್ಯಕ್ಷ ಸಾಂಟಿಯಾಗೊ ಪೆನಾ ಅವರನ್ನು ಬ್ಯಾಂಕಿಂಗ್ ಬಿಕ್ಕಟ್ಟಿಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಗೃಹಬಂಧನದಲ್ಲಿರಿಸಲಾಗಿದೆ.
'ಉಯೆನೊ ಬ್ಯಾಂಕ್' ದಿವಾಳಿಯಾದ ಹಿನ್ನೆಲೆಯಲ್ಲಿ ಲಕ್ಷಾಂತರ ಗ್ರಾಹಕರು ತಮ್ಮ ಉಳಿತಾಯ ಮತ್ತು ಬ್ಯಾಂಕ್ ಖಾತೆಗಳನ್ನು ಬಳಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಂಸತ್ತು ಪೆನಾ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಸರ್ವಾನುಮತದಿಂದ ಮತ ಚಲಾಯಿಸಿತು. ಇದರ ಬೆನ್ನಲ್ಲೇ ಅಲೈಯಾನ ಪ್ರಮಾಣವಚನ ಸ್ವೀಕರಿಸಿದರು.
ನೂತನ ಅಧ್ಯಕ್ಷರು ಆಗಸ್ಟ್ 2028ರವರೆಗೆ ಉಳಿದ ಅವಧಿಗೆ ಅಧಿಕಾರದಲ್ಲಿರಲಿದ್ದಾರೆ. ಬ್ಯಾಂಕ್ ಬಿಕ್ಕಟ್ಟಿನಿಂದ ಸಂಕಷ್ಟಕ್ಕೊಳಗಾದ ಠೇವಣಿದಾರರಿಗೆ ನೆರವು ನೀಡುವುದಾಗಿ ಹಾಗೂ ಸಾರ್ವಜನಿಕರ ಹಣವನ್ನು ಮರಳಿಸಲು ಕ್ರಮ ಕೈಗೊಳ್ಳುವುದಾಗಿ ಹೊಸ ಸರಕಾರ ಭರವಸೆ ನೀಡಿದೆ.
ಪೆನಾ ಅವರನ್ನು ಪದಚ್ಯುತಗೊಳಿಸಿದ ಬೆನ್ನಲ್ಲೇ ರಾಜಧಾನಿ ಅಸುನ್ಸಿಯೋನ್ ನಲ್ಲಿರುವ ಅವರ ನಿವಾಸದಲ್ಲಿ ಗೃಹಬಂಧನದಲ್ಲಿರಿಸಲಾಗಿದೆ. ವಿಚಾರಣೆ ನಡೆಯುವವರೆಗೆ ಅವರು ಮನೆಯಲ್ಲೇ ಇರಲಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.






