ಪ್ಯಾರಿಸ್: ರೈಲ್ವೇ ಹಳಿಯ ಮೇಲೆ 2ನೇ ವಿಶ್ವಯುದ್ದದ ಬಾಂಬ್ ಪತ್ತೆ

PC | NDTV
ಪ್ಯಾರಿಸ್: ಪ್ಯಾರಿಸ್ನ ಗೇರ್ ಡುನೋರ್ಡ್ ರೈಲ್ವೇ ನಿಲ್ದಾಣದ ಬಳಿ ರೈಲ್ವೇ ಹಳಿಯಲ್ಲಿ ಎರಡನೇ ವಿಶ್ವಯುದ್ಧ ಕಾಲದ ಸ್ಫೋಟಗೊಳ್ಳದ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೇ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ಯಾರಿಸ್ ಹೊರವಲಯದ ಸೈಂಟ್ ಡೆನಿಸ್ ನಗರದ ರೈಲ್ವೇ ಹಳಿಯಲ್ಲಿ ದೈನಂದಿನ ನಿರ್ವಹಣಾ ಕಾರ್ಯದ ಸಂದರ್ಭ ಹಳಿಯ ನಟ್ಟನಡುವೆ ಸ್ಫೋಟಗೊಳ್ಳದ ಬಾಂಬ್ ಪತ್ತೆಯಾಗಿದ್ದು ಇದು 2ನೇ ವಿಶ್ವಯುದ್ಧದ ಕಾಲಕ್ಕೆ ಸಂಬಂಧಿಸಿದ್ದು ಎಂದು ರೈಲ್ವೇ ಅಧಿಕಾರಿಗಳು ದೃಢಪಡಿಸಿದ್ದಾರೆ.
ಯುರೋಪಿಯನ್ ಸಾರಿಗೆ ವ್ಯವಸ್ಥೆಯ ಪ್ರಮುಖ ಕೊಂಡಿಯಾಗಿರುವ ಗೇರ್ ಡುನೋರ್ಡ್ ಫ್ರಾನ್ಸ್ನಿಂದ ಯುರೋಪಿಯನ್ ಯೂನಿಯನ್ ರಾಜಧಾನಿ ಬ್ರಸೆಲ್ಸ್, ನೆದರ್ಲ್ಯಾಂಡ್ಗೆ, ಪ್ಯಾರಿಸ್ನ ಮುಖ್ಯ ವಿಮಾನನಿಲ್ದಾಣ ಹಾಗೂ ಹಲವು ಪ್ರಾದೇಶಿಕ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಗೇರ್ ಡುನೋರ್ಡ್ ರೈಲ್ವೇ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದೆ. ಕನಿಷ್ಟ 3 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.







