2024ರಲ್ಲಿ ಜಗತ್ತಿನಾದ್ಯಂತ ಸಂಗಾತಿಗಳು, ಕುಟುಂಬ ಸದಸ್ಯರಿಂದಲೇ 50 ಸಾವಿರಕ್ಕೂ ಅಧಿಕ ಸ್ತ್ರೀಯರ ಹತ್ಯೆ!

Photo Credit : unwomen.org
ನ್ಯೂಯಾರ್ಕ್,ನ.25: ಜಗತ್ತಿನಾದ್ಯಂತ 2024ರಲ್ಲಿ ಸರಾಸರಿ ಪ್ರತಿ 10 ನಿಮಿಷಕ್ಕೆ ಒಬ್ಬರಂತೆ ಅಥವಾ ದಿನಕ್ಕೆ 137 ಮಂದಿಯಂತೆ 50 ಸಾವಿರಕ್ಕೂ ಅಧಿಕ ಮಹಿಳೆಯರು, ಬಾಲಕಿಯರು ತಮ್ಮ ಆಪ್ತ ಸಂಗಾತಿಗಳು ಅಥವಾ ಕುಟುಂಬ ಸದಸ್ಯರಿಂದ ಹತ್ಯೆಯಾಗಿದ್ದಾರೆಂದು ವಿಶ್ವಸಂಸ್ಥೆಯ ಮಾದಕದ್ರವ್ಯ ಹಾಗೂ ಅಪರಾಧ ಕುರಿತ ಕಾರ್ಯಾಲಯ (ಯುಎನ್ಓಡಿಸಿ) ಹಾಗೂ ವಿಶ್ವಸಂಸ್ಥೆಯ ಮಹಿಳಾ ಸಂಘಟನೆ ಸೋಮವಾರ ಪ್ರಕಟಿಸಿದ ವರದಿಯೊಂದು ತಿಳಿಸಿದೆ. ಪ್ರತಿ ವರ್ಷವೂ ಸಹಸ್ರಾರು ಮಹಿಳೆಯರು ಹತ್ಯೆಯಾಗುತ್ತಿದ್ದು, ಅದನ್ನು ತಡೆಗಟ್ಟುವಲ್ಲಿ ನಿಜವಾದ ಪ್ರಗತಿಯಾಗಿರುವ ಬಗ್ಗೆ ಯಾವುದೇ ಲಕ್ಷಣ ಕಂಡುಬರುತ್ತಿಲ್ಲವೆಂದು ಅವರು ಹೇಳಿದ್ದಾರೆ.
ಕಳೆದ ವರ್ಷ 83 ಸಾವಿರಕ್ಕೂ ಅಧಿಕ ಮಹಿಳೆಯರು ಹಾಗೂ ಬಾಲಕಿಯರು ಉದ್ದೇಶಪೂರ್ವಕವಾಗಿ ಕೊಲೆಯಾಗಿದ್ದಾರೆ. ಇವರ ಪೈಕಿ ಶೇ.60ರಷ್ಟು ಮಂದಿ ತಮ್ಮ ಸಂಗಾತಿಗಳಿಂದ ಅಥವಾ ಸಂಬಂಧಿಕರಿಂದ ಕೊಲ್ಲಲ್ಪಟ್ಟಿದ್ದಾರೆಂದು ವರದಿ ತಿಳಿಸಿದೆ.
ಈ ಅಂಕಿಅಂಶಗಳಿಗೆ ಹೋಲಿಸಿದರೆ, 2024ರಲ್ಲಿ ಶೇ.11ರಷ್ಟು ಪುರುಷರು ತಮ್ಮ ಆಪ್ತ ಸಂಗಾತಿಗಳಿಂದ ಅಥವಾ ಕುಟುಂಬ ಸದಸ್ಯರಿಂದ ಕೊಲೆಯಾಗಿದ್ದಾರೆಂದು ವರದಿ ಹೇಳಿದೆ.
ಕಳೆದ ವರ್ಷ ವರದಿಯಾದ ಹಲವಾರು ಪ್ರಕರಣಗಳಲ್ಲಿ ಮಹಿಳೆಯರು ಹಾಗೂ ಬಾಲಕಿಯರ ಕೊಲೆಗಳನ್ನು ತಡೆಯಲು ಸಾಧ್ಯವಿತ್ತಾದರೂ, ರಕ್ಷಣೆ, ಪೊಲೀಸರ ಪ್ರತಿಕ್ರಿಯೆ ಹಾಗೂ ಸಾಮಾಜಿಕ ಬೆಂಬಲದ ವ್ಯವಸ್ಥೆಗಳ ಕೊರತೆಯು ಮಹಿಳೆಯರು ಹಾಗೂ ಬಾಲಕಿಯರನ್ನು ಸಾವಿನೆಡೆಗೆ ದೂಡಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
ಹಲವಾರು ದೇಶಗಳಲ್ಲಿ ದತ್ತಾಂಶ ಸಂಗ್ರಹ ವ್ಯವಸ್ಥೆ ತೀರಾ ಕಳಪೆಯಾಗಿರುವುದರಿಂದ ಮಹಿಳಾ ಸಾವುನೋವಿನ ಅಂಕಿಅಂಶಗಳನ್ನು ವಾಸ್ತವಕ್ಕಿಂತ ಕಡಿಮೆಯಾಗಿ ಅಂದಾಜಿಸಲಾಗಿದೆಯೆಂದು ವರದಿ ಹೇಳಿದೆ. ಹಿಂಸಾಚಾರದಲ್ಲಿ ಬದುಕುಳಿದವರು ದೂರು ನೀಡಲು ಭಯಪಡುತ್ತಿರುವುದು ಹಾಗೂ ಸವಕಲು ಕಾನೂನು ವ್ಯಾಖ್ಯಾನಗಳಿಂದಾಗಿ ಹಲವಾರು ಪ್ರಕರಣಗಳನ್ನು ದೃಢಪಡಿಸಲು ಕಷ್ಟಕರವಾಗಿದೆ ಎಂದು ವರದಿ ತಿಳಿಸಿದೆ.
‘‘ಆರ್ಥಿಕ ಅಸ್ಥಿರತೆ,ಸಂಘರ್ಷ, ಬಲವಂತದ ಸ್ಥಳಾಂತರ ಹಾಗೂ ಸುರಕ್ಷಿತ ವಾಸ್ತವ್ಯದ ಕೊರತೆ ಇವುಗಳಿಂದಾಗಿ ಮಹಿಳೆಯರು ಪ್ರಾಣಾಪಾಯವನ್ನು ಎದುರಿಸುತ್ತಿದ್ದಾರೆ. ಜಗತ್ತಿನಾದ್ಯಂತ ಹಲವಾರು ಮಹಿಳೆಯರು ಹಾಗೂ ಬಾಲಕಿಯರಿಗೆ ಮನೆಯು ಅತ್ಯಂತ ಅಪಾಯಕಾರಿ ಅಥವಾ ಕೆಲವೊಮ್ಮೆ ಮಾರಣಾಂತಿಕ ಸ್ಥಳವಾಗಿ ಉಳಿದಿದೆ’’ ಎಂದು ಯುಎನ್ಓಡಿಸಿಯ ಕಾರ್ಯಕಾರಿ ನಿರ್ದೇಶಕಜಾನ್ ಬ್ರಾಂಡೊಲಿನೊ ಅವರು ತಿಳಿಸಿದ್ದಾರೆ.







