ಅಮೆರಿಕಕ್ಕೆ ತಲುಪಬೇಕಿದ್ದ ಎಫ್-35 ಜೆಟ್ ಭಾಗಗಳು ಹಾಂಗ್ಕಾಂಗ್ನಲ್ಲಿ ನಾಪತ್ತೆ: ಚೀನಾ ಮುಟ್ಟುಗೋಲು; ವರದಿ

US F-35 fighter jet | Photo Credit : indiatoday
ವಾಶಿಂಗ್ಟನ್: ಆಸ್ಟ್ರೇಲಿಯಾದಿಂದ ಅಮೆರಿಕಕ್ಕೆ ರವಾನೆಯಾಗಬೇಕಿದ್ದ ಎಫ್-35 ಸ್ಟೆಲ್ತ್ ಫೈಟರ್ ಜೆಟ್ನ ಅತ್ಯಂತ ಸೂಕ್ಷ್ಮ ಭಾಗಗಳು ಮೇ ತಿಂಗಳಲ್ಲಿ ನಿಗೂಢವಾಗಿ ಹಾಂಗ್ಕಾಂಗ್ ತಲುಪಿದ್ದವು. ಪ್ರಸ್ತುತ ಈ ಭಾಗಗಳನ್ನು ಅಮೆರಿಕದ ಪ್ರಮುಖ ಮಿಲಿಟರಿ ಎದುರಾಳಿಯಾದ ಚೀನಾ ಮುಟ್ಟುಗೋಲು ಹಾಕಿಕೊಂಡಿದೆ ಎಂದು `ಬ್ಲೂಮ್ಬರ್ಗ್' ವರದಿ ಮಾಡಿದೆ.
ಎಫ್-35 ಜೆಟ್ನ ಈ ಭಾಗಗಳು ಹಾಂಗ್ಕಾಂಗ್ ತಲುಪಿದ್ದು ಹೇಗೆ ಎಂಬುದರ ಕುರಿತು ಆಸ್ಟ್ರೇಲಿಯಾ ಮತ್ತು ಅಮೆರಿಕದ ರಕ್ಷಣಾ ಇಲಾಖೆ ಎರಡೂ ತನಿಖೆ ಆರಂಭಿಸಿವೆ. ಈ ಬಿಡಿಭಾಗಗಳಲ್ಲಿ ಕಾಕ್ಪಿಟ್ ಕ್ಯಾನೋಪಿ (ಮೈಮುಚ್ಚುವ ಗಾಜು) ಮತ್ತು ಶಸ್ತ್ರಾಸ್ತ್ರಗಳನ್ನು ಇಡುವ ಬಾಗಿಲು ಸೇರಿವೆ. ಇವೆರಡಕ್ಕೂ ರೇಡಾರ್ ಶಕ್ತಿಯನ್ನು ಹೀರಿಕೊಳ್ಳುವ ವಿಶೇಷ ವಸ್ತುವಿನ ಲೇಪನ ಮಾಡಲಾಗಿತ್ತು. ಇದು ರೇಡಾರ್ಗೆ ಸಿಗದಂತೆ ಜೆಟ್ ಅನ್ನು ಮರೆಮಾಚುವ (ಸ್ಟೆಲ್ತ್) ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳಲು ಅಮೆರಿಕಕ್ಕೆ ದಶಕಗಳೇ ಬೇಕಾಗಿದ್ದವು.
ಎಫ್-35 ಅಮೆರಿಕದ ವಾಯುಪಡೆಯ ಪ್ರಮುಖ ಶಕ್ತಿಯಾಗಿದ್ದು, ಇದರ ಮೌಲ್ಯವು ಬಹುತೇಕ ಇದರ ರಹಸ್ಯ ತಂತ್ರಜ್ಞಾನದ ಮೇಲೆಯೇ ನಿಂತಿದೆ. ಈಗ ಚೀನಾಕ್ಕೆ ಈ ಬಿಡಿಭಾಗಗಳ ಲಭ್ಯತೆಯು, ರೇಡಾರ್ನಿಂದ ತಪ್ಪಿಸಿಕೊಳ್ಳಲು ಎಫ್-35ಗೆ ಸಹಾಯ ಮಾಡುವ ಅಮೆರಿಕದ ಸೂಕ್ಷ್ಮ ತಂತ್ರಜ್ಞಾನಗಳ ಒಳನೋಟಗಳನ್ನು ನೀಡಬಹುದು ಮತ್ತು ಅದರ ನ್ಯೂನತೆಗಳನ್ನು ಬಹಿರಂಗಪಡಿಸಬಹುದು. ಅಮೆರಿಕವು ಎಫ್-35 ತಂತ್ರಜ್ಞಾನಗಳನ್ನು ಅತ್ಯಂತ ಜಾಗರೂಕತೆಯಿಂದ ಕಾಯ್ದುಕೊಂಡಿದೆ. ಇದೇ ಕಾರಣಕ್ಕೆ ಅಮೆರಿಕ ತನ್ನ ನ್ಯಾಟೋ ಮಿತ್ರರಾಷ್ಟ್ರಗಳನ್ನು ಹೊರತುಪಡಿಸಿ ಇತರ ದೇಶಗಳಿಗೆ ಈ ಜೆಟ್ ಮಾರಾಟ ಮಾಡಲು ಹಿಂಜರಿಯುತ್ತಿತ್ತು.
ಚೀನಾ ತನ್ನದೇ ಆದ ಸ್ಟೆಲ್ತ್ ವಿಮಾನಗಳನ್ನು ಸುಧಾರಿಸಲು ಎಫ್-35 ಬಿಡಿಭಾಗಗಳನ್ನು `ರಿವರ್ಸ್-ಎಂಜಿನಿಯರಿಂಗ್' (ತಂತ್ರಜ್ಞಾನವನ್ನು ಬಿಡಿಸಿ ಅಧ್ಯಯನ ಮಾಡುವುದು) ಮಾಡಬಹುದು. ಜೊತೆಗೆ, ಇದನ್ನು ಎದುರಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಎಫ್-35 ಹೊಂದಿರುವ ಮಿಲಿಟರಿ ಶಕ್ತಿಯನ್ನು ಕುಗ್ಗಿಸಬಹುದು ಎಂಬ ಆತಂಕ ಅಮೆರಿಕಕ್ಕೆ ಎದುರಾಗಿದೆ ಎಂದು ವರದಿ ತಿಳಿಸಿದೆ






