ಯುದ್ಧದ ನಡುವೆ ಟ್ರಂಪ್ ಗಾಗಿ ಪಾದ್ರಿಗಳಿಂದ ಶ್ವೇತಭವನದಲ್ಲಿ ಪ್ರಾರ್ಥನೆ

ಡೊನಾಲ್ಡ್ ಟ್ರಂಪ್ | Photo Credit : indiatoday.in
ವಾಷಿಂಗ್ಟನ್: ಇರಾನ್ ಜೊತೆ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ವಿವಿಧ ಭಾಗಗಳಿಂದ ಪಾದ್ರಿಗಳ ಗುಂಪನ್ನು ಶ್ವೇತಭವನಕ್ಕೆ ಆಹ್ವಾನಿಸಿ, ಓವಲ್ ಕಚೇರಿಯಲ್ಲಿ ವಿಶೇಷ ಪ್ರಾರ್ಥನಾ ಸಭೆ ನಡೆಸಿದರು.
ಗುರುವಾರ ಬಿಡುಗಡೆಯಾದ ವೀಡಿಯೊದಲ್ಲಿ ಹಲವಾರು ಪಾದ್ರಿಗಳು ಟ್ರಂಪ್ ಅವರನ್ನು ಸುತ್ತುವರಿದು ನಿಂತು, ಅವರ ಮೇಲೆ ಕೈಗಳನ್ನು ಇಟ್ಟು ಪ್ರಾರ್ಥನೆ ಮಾಡುವ ದೃಶ್ಯಗಳು ಕಾಣಿಸಿಕೊಂಡಿವೆ. ದೇಶ ಎದುರಿಸುತ್ತಿರುವ ‘ಸವಾಲಿನ ಸಮಯ’ದಲ್ಲಿ ಅಧ್ಯಕ್ಷರಿಗೆ ದೈವಿಕ ಮಾರ್ಗದರ್ಶನ, ಜ್ಞಾನ ಮತ್ತು ರಕ್ಷಣೆಯನ್ನು ನೀಡುವಂತೆ ಅವರು ದೇವರಲ್ಲಿ ಪ್ರಾರ್ಥಿಸಿದರು.
ಅಧ್ಯಕ್ಷರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ವೇಳೆ ಟ್ರಂಪ್ ಅವರಿಗೆ ಬುದ್ಧಿವಂತಿಕೆ ಹಾಗೂ ಧೈರ್ಯ ದೊರಕಲಿ ಎಂದು ಪಾದ್ರಿಗಳು ಕೋರಿದರು. ದೇಶವನ್ನು ಮುನ್ನಡೆಸುವ ನಾಯಕತ್ವಕ್ಕೆ ದೇವರ ಆಶೀರ್ವಾದ ದೊರಕಲಿ ಎಂಬುದಾಗಿ ಪ್ರಾರ್ಥಿಸಿದರು.
ಪ್ರಮುಖ ಪಾದ್ರಿ ಟಾಮ್ ಮುಲ್ಲಿನ್ಸ್ ಪ್ರಾರ್ಥನೆ ವೇಳೆ, ‘ಅವರ ಹೃದಯ ಮತ್ತು ಮನಸ್ಸು ಭಗವಂತನ ಕೃಪೆಯಿಂದ ತುಂಬಿರಲಿ. ಈ ಸವಾಲಿನ ಸಮಯದಲ್ಲಿ ಅವರಿಗೆ ಸ್ವರ್ಗದಿಂದ ಜ್ಞಾನ ದೊರಕಲಿ. ದೇವರು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಲಿ’ ಎಂದು ಹೇಳಿದರು.
ಅವರು ಮುಂದುವರಿಸಿ, ‘ಅಮೆರಿಕದ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪುರುಷರು ಮತ್ತು ಮಹಿಳೆಯರಿಗೆ ದೇವರ ಅನುಗ್ರಹ ಮತ್ತು ರಕ್ಷಣೆಯಿರಲಿ. ದೇವರ ಅಡಿಯಲ್ಲಿ ಒಂದೇ ರಾಷ್ಟ್ರವಾಗಿ ಮುಂದುವರಿಯುವಾಗ ಎಲ್ಲರಿಗೂ ಸ್ವಾತಂತ್ರ್ಯ ಮತ್ತು ನ್ಯಾಯದೊಂದಿಗೆ ದೇಶವನ್ನು ಮುನ್ನಡೆಸಲು ಅಧ್ಯಕ್ಷರಿಗೆ ಅಗತ್ಯವಾದ ಶಕ್ತಿ ದೊರಕಲಿ’ ಎಂದು ಪ್ರಾರ್ಥಿಸಿದರು.
ಇತ್ತೀಚೆಗೆ ಅಮೆರಿಕ ಇರಾನ್ ವಿರುದ್ಧ ‘ಆಪರೇಷನ್ ಎಪಿಕ್ ಫ್ಯೂರಿ’ ಎಂಬ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಈ ಪ್ರಾರ್ಥನಾ ಸಭೆ ನಡೆದಿದೆ.
ಈ ಕಾರ್ಯಾಚರಣೆಯಲ್ಲಿ ಇರಾನ್ ನ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ಸೇರಿದಂತೆ ಹಲವರು ಸಾವನ್ನಪ್ಪಿದ್ದು, ಪ್ರಮುಖ ಮಿಲಿಟರಿ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಇದಕ್ಕೆ ಪ್ರತಿಯಾಗಿ ಇರಾನ್ ಪರ್ಷಿಯನ್ ಕೊಲ್ಲಿಯ ಪ್ರದೇಶದಲ್ಲಿರುವ ಅಮೆರಿಕದ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಶುಕ್ರವಾರದ ವೇಳೆಗೆ ಈ ದಾಳಿಗಳು ಏಳನೇ ದಿನಕ್ಕೂ ಮುಂದುವರಿದಿವೆ.







